ಪ್ಯಾರಸಿಟಮಾಲ್ ಬಗ್ಗೆ ಯಾರಿಗೆ ಗೊತ್ತಿಲ್ಲಾ ಹೇಳಿ? ಸಣ್ಣ ಜ್ವರ ಬಂದರೆ ಸಾಕು ವೈದ್ಯರ ಬಳಿಗೆ ಹೋಗುವ ಮೊದಲು ಮೆಡಿಕಲ್ಗೆ ಹೋಗಿ ಮಾತ್ರೆ ತೆಗೆದುಕೊಂಡು ತಿನ್ನುತ್ತಾರೆ. ಪ್ರಿಸ್ಕ್ರಿಪ್ಷನ್ ಇಲ್ಲದೆ ದೊರೆಯುವ ಈ ಮಾತ್ರೆಯನ್ನು, ಹೆಚ್ಚು ಹೆಚ್ಚು ಸೇವನೆ ಮಾಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ಜ್ವರ ಮತ್ತು ನೋವು ನಿವಾರಕ ಮಾತ್ರೆಯಾದರೂ ಶಿಫಾರಸು ಮಾಡಲಾದ ಡೋಸೇಜ್ಗಿಂತ ಅಧಿಕ ಸೇವಿಸಿದರೆ ಹಲವಾರು ಹಾನಿಕಾರಕ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.
ಇತ್ತೀಚಿಗೆ ಎಎನ್ಐ ನಡೆಸಿದ ಸಂದರ್ಶನದಲ್ಲಿ ಡಾ. ಶಿವಕುಮಾರ್ ಸರಿನ್ ಅವರು ಪ್ಯಾರಸಿಟಮಾಲ್ ಲಿವರ್ ಡ್ಯಾಮೇಜ್ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಅವರು ಹೇಳುವ ಪ್ರಕಾರ “ಹೆಚ್ಚು ಪ್ಯಾರಸಿಟಮಾಲ್ ಮಾತ್ರೆಯನ್ನು ಸೇವನೆ ಮಾಡುವುದರಿಂದ ಗ್ಲುಟಾ ಥಯೋನ್ ಕಡಿಮೆಯಾಗುತ್ತದೆ. ಇದು ನಮ್ಮ ಲಿವರ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆಲ್ಕೋಹಾಲ್ ಸೇವನೆ ಮಾಡುವವರಲ್ಲಿ ಮತ್ತು ದಪ್ಪಗಿರುವವರಲ್ಲಿ ಸಾಮಾನ್ಯವಾಗಿ ಇದು ಕಡಿಮೆ ಇರುತ್ತದೆ. ಹಾಗಾಗಿ ಪ್ಯಾರಸಿಟಮಾಲ್ನ ಮಿತಿ ಮೀರಿದ ಸೇವನೆಯು ಯಕೃತ್ತಿನ (ಲಿವರ್) ವೈಫಲ್ಯಕ್ಕೆ ಕಾರಣವಾಗಬಹುದು” ಎಂದಿದ್ದಾರೆ.
ಡಾ. ಸರಿನ್ ಅವರು ಹೇಳುವ ಪ್ರಕಾರ “ಪ್ಯಾರಸಿಟಮಾಲ್ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂಬುದು ತಿಳಿದಿರಬೇಕು. ಏಕೆಂದರೆ ಎಲ್ಲರ ದೇಹ ಪ್ರಕೃತಿ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ನೀವು ಎಷ್ಟು ಸೇವನೆ ಮಾಡುತ್ತೀರಿ ಎಂಬುದು ನಿಮಗೆ ತಿಳಿದಿರಬೇಕು. ಇಲ್ಲವಾದಲ್ಲಿ ಅಮೆರಿಕ, ಇಂಗ್ಲೆಂಡ್ ಗಳಲ್ಲಿ ಆಗಿರುವಂತೆ ಪ್ಯಾರಸಿಟಮಾಲ್ ಮಾತ್ರೆ ಲಿವರ್ ಹಾಳಾಗುವುದಕ್ಕೆ ಮುಖ್ಯ ಕಾರಣವಾಗುತ್ತದೆ. ಇದು ನೋವು ನಿವಾರಕಗಳಾಗಿರುವುದರಿಂದ ಅಗತ್ಯಕ್ಕಿಂತ ಹೆಚ್ಚು ಯಾರ ದೇಹಕ್ಕೂ ಒಳ್ಳೆಯದಲ್ಲ. ನಿಮಗೆ ತೆಗೆದುಕೊಳ್ಳುವ ಸಂದರ್ಭ ಬಂದರೆ ಅರ್ಧ ಮಾತ್ರೆಗಳನ್ನು ಮೂರು ಅಥವಾ ನಾಲ್ಕು ಬಾರಿ ತೆಗೆದುಕೊಳ್ಳಿ. ಒಂದು ದಿನಕ್ಕೆ ಇದಕ್ಕಿಂತ ಹೆಚ್ಚು ಮಾತ್ರೆಯನ್ನು ತೆಗೆದುಕೊಳ್ಳಬೇಡಿ. ನೀವು ಮಿತಿಮೀರಿ ಪ್ಯಾರಸಿಟಮಾಲ್ ಸೇವನೆ ಮಾಡುತ್ತಿದ್ದೀರಿ ಎಂದು ನಿಮಗೆ ಅನಿಸಿದರೆ ತಕ್ಷಣವೇ ನಿಮ್ಮ ವೈದ್ಯರ ಗಮನಕ್ಕೆ ತರುವುದು ಒಳ್ಳೆಯದು” ಎಂದಿದ್ದಾರೆ.