ಬೆಂಗಳೂರು:- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಯಾಣಿಕರಿಲ್ಲದೇ ಖಾಸಗಿ ಬಸ್ಗಳು ಭಾನುವಾರ ಖಾಲಿ ಹೊಡೆದಿವೆ. ನಿತ್ಯ ಬಸ್ ತುಂಬ ಪ್ರಯಾಣಿಕರನ್ನು ನೋಡುತ್ತಿದ್ದ ಖಾಸಗಿ ಬಸ್ ಚಾಲಕ-ನಿರ್ವಾಹಕರು ಆದಾಯಕ್ಕೆ ಶಕ್ತಿ ಯೋಜನೆಯಿಂದ ಕತ್ತರಿ ಬೀಳುವ ಆತಂಕದಲ್ಲಿದ್ದಾರೆ. ರಾಜ್ಯದ ಖಾಸಗಿ ಸಾರಿಗೆ ವ್ಯವಸ್ಥೆ ಪರಿಸ್ಥಿತಿಯೂ ಹೀಗೆ ಆಗಲಿದೆ.
ಕರ್ನಾಟಕದಲ್ಲಿ ‘ಶಕ್ತಿ ಯೋಜನೆ’ಯಿಂದಾಗಿ ಖಾಸಗಿ ಬಸ್ಗಳು ಖಾಲಿ ಹೊಡೆಯುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ನೆನ್ನೆ ಭಾನುವಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಶಕ್ತಿ ಯೋಜನೆಗೆ ಮುಖ್ಯಮಮತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯ ಪರಿಣಾಮವನ್ನು ಖಾಸಗಿ ಬಸ್ ನಿರ್ವಾಹಕರು ಅನುಭವಿಸುತ್ತಿದ್ದಾರೆ.
ಬೆಂಗಳೂರಿನ ಮಧ್ಯಭಾಗದ ಸಾರಿಗೆ ಕೇಂದ್ರವಾದ ಕಲಾಸಿಪಾಳ್ಯದಲ್ಲಿ ಪಾವಗಡಕ್ಕೆ ತೆರಳುವ ಖಾಸಗಿ ಬಸ್ನಲ್ಲಿ ನಿತ್ಯ 25-30 ಮಂದಿ ಪ್ರಯಾಣಿಕರು ಇರುತ್ತಿದ್ದರು. ಆದರೆ ಉಚಿತ ಪ್ರಯಾಣ ಯೋಜನೆಯಿಂದಾಗಿ ಭಾನುವಾರ ಆ ಬಸ್ನಲ್ಲಿ ಇಬ್ಬರು ಮಾತ್ರವೇ ಇದ್ದರು. ಆ ಖಾಸಗಿ ಬಸ್ ಚಾಲಕ ಮಂಜುನಾತ್ ತಮಗೆ ಬಂದ ದುಸ್ಥಿತಿ ಬಗ್ಗೆ ಅಳಲು ತೋಡಿಕೊಂಡರು.
ಸಕಾರಿ ಬಸ್ಗಳತ್ತ ವಾಲಿದ ಪ್ರಯಾಣಿಕರು
ನಿತ್ಯವು ಖಾಸಗಿ ಬಸ್ಗಳಲ್ಲಿ ಓಡಾಡುತ್ತಿದ್ದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಜಾರಿಯಾಗುತ್ತಿದ್ದಂತೆ ಭಾನುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್ ಗಳನ್ನು ಹತ್ತಲು ದೌಡಾಯಿಸಿದರು. ಇದರಿಂದ ಜನದಟ್ಟಣೆಯ ಮತ್ತು ಪ್ರಯಾಣಿಕರಿಂದ ತುಂಬಿರುತ್ತಿದ್ದ ಕಲಾಸಿಪಾಳ್ಯ, ಕೆ.ಆರ್ ಮಾರುಕಟ್ಟೆಯ ಖಾಸಗಿ ಬಸ್ ನಿಲ್ದಾಣವು ಭಾನುವಾರ ನಿರ್ಜನವಾಗಿದ್ದು ಕಂಡು ಬಂತು.
ಬೆಂಗಳೂರಿನಿಂದ ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ನಿತ್ಯ ಪ್ರಯಾಣಿಕರನ್ನು ಕರೆದೊಯ್ಯತ್ತಿದ್ದ ಖಾಸಗಿ ಬಸ್ಗಳಲ್ಲಿ ಅಷ್ಟಾಗಿ ಪ್ರಯಾಣಿಕರು ಕಂಡು ಬರಲಿಲ್ಲ. ಮೊದಲ ದಿನವೇ ಖಾಸಗಿ ಬಸ್ ಮಾಲೀಕರಿಗೆ ಇಂತದ್ದೊಂದು ಅನುಭವ ಎದುರಿಸಿದರು. KSRTC ಬಸ್ನತ್ತ ದೌಡಾಯಿಸಿದ ಪ್ರಯಾಣಿಕರು ಮೆಜೆಸ್ಟಿಕ್ ಟರ್ಮಿನಲ್ ಗೆ ತೆರಳಲು ಸಹ ಉಚಿತವಿದ್ದ ಬಿಎಂಟಿಸಿ ಬಸ್ಗಳನ್ನೇ ಏರಿದರು. ಇದರಿಂದಾಗಿ ಖಾಸಗಿ ಬಸ್ ಆದಾಯಕ್ಕೆ ಕತ್ತರಿ ಬಿದ್ದಿದೆ.