ಮೈಸೂರು: ಒಕ್ಕಲಿಗರು ಸಂಸ್ಕೃತಿ ಹೀನರೆಂದು ಹೇಳಿಕೆ ನೀಡಿದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಹೇಳಿಕೆಯ ವಿರೋಧಿಸಿದ ಮೈಸೂರು- ಚಾಮರಾಜನಗರ ಒಕ್ಕಲಿಗರ ಸಂಘದ ಮುಖಂಡರು ಭಗವಾನ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕುವೆಂಪುನಗರದ ಭಗವಾನ್ ನಿವಾಸಕ್ಕೆ ಮುತ್ತಿಗೆ ಹಾಕಿದ ಒಕ್ಕಲಿಗ ಸಮುದಾಯದ ಮುಖಂಡರು ಭಗವಾನ್ ಅವರು ಮಹಿಷಾ ದಸರಾ ವೇದಿಕೆಯಲ್ಲಿ ಸಮುದಾಯದ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ. ಇದೇ ಮೊದಲಲ್ಲ ಈ ಹಿಂದೆಯೂ ಸಹ ಸಮುದಾಯ ಹಾಗೂ ಸಂಸ್ಕೃತಿಯ ಭಾವನೆ ಕೆರಳುವ ಹೇಳಿಕೆ ನೀಡಿ ಇದೇ ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಇದಾಗಿಯೂ ಅವರು ಹೇಳಿಕೆ ಮುಂದುವರೆಸಿದ್ದಾರೆ. ಈ ಹಿಂದಿನ ಪ್ರಕರಣದಲ್ಲಿಯೇ ಬಂಧನ ಮಾಡಿದ್ದರೆ ಅವರು ಮತ್ತೆ ಅಂತಹ ಹೇಳಿಕೆ ಕೊಡುತ್ತಿರಲಿಲ್ಲ. ಹೀಗಾಗಿ ಈ ಕೂಡಲೇ ಅವರನ್ನು ಬಂಧಿಸಬೇಕು. ಮತ್ತೊಬ್ಬರ ಭಾವನೆಗೆ ಧಕ್ಕೆಯುಂಟು ಮಾಡುವ ಭಗವಾನ್ ಹಾಗೂ ಪ್ರೊ.ಮಹೇಶ್ ಚಂದ್ರ ಗುರು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಹಾಗೂ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಅವರ ಮನೆಯ ಮುತ್ತಿಗೆಗೆ ಯತ್ನಿಸಿದ ನೂರಾರು ಮಂದಿಯನ್ನು ಪೊಲೀಸರು ತಡೆದು ಬಂಧಿಸಿದರು. ಈ ವೇಳೆ ಕೆಲ ಕಾಲ ರಸ್ತೆ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್, ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಗಿರೀಶ್, ಚೇತನ್, ಮುಖಂಡರಾದ ಸತೀಶ್ ಗೌಡ, ಸ್ಚರೂಪ್ ಮೊದಲಾದವರು ಉಪಸ್ಥಿತರಿದ್ದರು.