ಚಾಮರಾಜನಗರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣಕಾಸಿನ ದುರ್ಬಳಕೆ ಬಗ್ಗೆ ವ್ಯಾಪಕವಾದ ದೂರುಗಳು ಕೇಳಿಬಂದ ಪ್ರಕರಣಗಳ ಬಗ್ಗೆ ಸರ್ಕಾರ ಗಮನಹರಿಸಲಿದೆ ಎಂದು ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಂಗಳವಾರ ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆ ಇದ್ದಂತೆ ಕಾಣುತ್ತದೆ ಎಂದು ಮೈಸೂರು –ಕೊಡಗು ಸಂಸದ ಪ್ರತಾಪ ಸಿಂಹ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಾಪ ಸಿಂಹ ಹೇಳಿಕೆಗೆ ಮಾನ್ಯತೆ ಇದೆಯಾ? ಗಾಂಭೀರ್ಯ, ತೂಕ, ಅರ್ಥ ಏನಾದರೂ ಇದೆಯೇ? ಅರ್ಥ ರಹಿತ ಮಾತುಗಳಿಗೆ ಪ್ರತಿಕ್ರಿಯೆ ಮಾಡುವ ಅಗತ್ಯವಿಲ್ಲ. ಹೊಂದಾಣಿಕೆಯ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಮಾಡಿಕೊಂಡವರು ಹೇಳಬೇಕು’ ಎಂದರು.
‘ಹಾಗಾದರೆ, ಬಿಜೆಪಿಯ ವಿರುದ್ಧ ಕೇಳಿ ಬಂದಿದ್ದ ಶೇ 40 ಕಮಿಷನ್ ಆರೋಪದ ಬಗ್ಗೆ ನಿಮ್ಮ ಸರ್ಕಾರ ತನಿಖೆ ನಡೆಸುವುದಿಲ್ಲವೇ’ ಎಂದು ಕೇಳಿದ್ದಕ್ಕೆ, ‘ಕಾನೂನು ಉಲ್ಲಂಘನೆ, ಹಣಕಾಸಿನ ದುರ್ಬಳಕೆಯಾಗಿರುವ, ಅವ್ಯವಹಾರದ ಬಗ್ಗೆ ವ್ಯಾಪಕ ದೂರು ಬಂದಿರುವ ಪ್ರಕರಣ ಹಾಗೂ ಶೇ 40 ಕಮಿಷನ್ ಆರೋಪ ಕೇಳಿ ಬಂದಿರುವ ಪ್ರಕರಣಗಳ ಬಗ್ಗೆ ಸರ್ಕಾರ ಗಂಭೀರವಾಗಿ ಗಮನಹರಿಸಲಿದೆ. ಆರೋಪಗಳ ಬಗ್ಗೆ ತನಿಖೆಯನ್ನೂ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗೆ ಹಣ ಹೇಗೆ ಕ್ರೋಡೀಕರಿಸುತ್ತೀರಿ ಎಂದು ಪ್ರಶ್ನಿಸಿರುವವರನ್ನು ಮನುವಾದಿಗಳು ಎಂದು ಕರೆಯಲಾಗುತ್ತಿದೆ ಎಂಬ ಪ್ರತಾಪ ಸಿಂಹ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ‘ಯೋಜನೆಗೆ ಹಣ ಕ್ರೋಡೀಕರಿಸುವುದು ಹಣಕಾಸು ಇಲಾಖೆಗೆ ಸಂಬಂಧಿಸಿದ ವಿಚಾರ. ಮುಖ್ಯಮಂತ್ರಿಯವರೇ ಹಣಕಾಸು ಸಚಿವರಾಗಿದ್ದಾರೆ. ಅವರು 13 ಬಜೆಟ್ ಮಂಡಿಸಿದ್ದಾರೆ. ಅವರಿಗೆ ಆಳವಾದ ಅನುಭವವಿದೆ. ಯೋಜನೆಗಳಿಗೆ ಹಣ ಹೇಗೆ ಸಂಗ್ರಹಿಸುತ್ತೇವೆ ಎಂದು ಪ್ರತಾಪ್ ಸಿಂಹಗೆ ನಾವು ಹೇಳುವುದಕ್ಕಾಗುತ್ತದೆಯೇ’ ಎಂದು ಪ್ರಶ್ನಿಸಿದರು.
‘ಬಿಜೆಪಿ ಅಧಿಕಾರದಲ್ಲಿದ್ದಾಗ ವಿದ್ಯುತ್ ದರ ಏರಿಕೆ ತೀರ್ಮಾನ ಮಾಡಿತ್ತು. ಈಗ ನಮ್ಮ ಸರ್ಕಾರದ ಮೇಲೆ ದೂರುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿದ್ಯುತ್ ದರ ಏರಿಕೆಯಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದು ಶಾಸಕ ತನ್ವೀರ್ ಸೇಟ್ ಸರ್ಕಾರಕ್ಕೆ ಪತ್ರ ಬರೆದಿರುವುದರ ಬಗ್ಗೆ ಕೇಳಿದ್ದಕ್ಕೆ, ‘ಅದು ಅವರ ವೈಯಕ್ತಿಕ ಅಭಿಪ್ರಾಯ. ಸರ್ಕಾರ ಅದನ್ನು ನೋಡಿಕೊಳ್ಳುತ್ತದೆ’ ಎಂದು ಪ್ರತಿಕ್ರಿಯಿಸಿದರು.
‘ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು. ಇಲಾಖೆಯ ವಸತಿ ಶಾಲೆಗಳಲ್ಲಿ ಮತ್ತು ಹಾಸ್ಟೆಲ್ಗಳಿಗೆ ಹೆಚ್ಚು ಮಕ್ಕಳನ್ನು ದಾಖಲಿಸಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಸಭೆಗಳನ್ನು ನಡೆಸಿದ್ದೇನೆ. ಸೀಟುಗಳಿಗೆ ಬೇಡಿಕೆ ಇದೆ’ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.