ಬೇಸಿಗೆಯ ಬಿರು ಬಿಸಿಲಿನಲ್ಲಿ ದೇಹಕ್ಕೆ ತಂಪು ಬೇಕೆನಿಸುತ್ತೆ. ಅದಕ್ಕಾಗಿ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಹೊರಗಡೆ ಸಿಗುವ ಜ್ಯೂಸ್ ಮಾದರಿಯ ಪಾನೀಯಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಆರೋಗ್ಯಕರ ಪಾನೀಯವನ್ನು ಮನೆಯಲ್ಲೇ ಮಾಡಿ ಸೇವಿಸುವುದು ಉತ್ತಮ. ಇವತ್ತು ದೇಹಕ್ಕೆ ರಿಫ್ರೆಶ್ಮೆಂಟ್ ಕೊಡುವ, ಆರೋಗ್ಯದಾಯಕ ಕೇರಳ ಸ್ಟೈಲ್ ಕುಲುಕ್ಕಿ ಶರ್ಬತ್ ಹೇಗೆ ಮಾಡುವುದು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಬೇಕಾಗುವ ಸಾಮಗ್ರಿಗಳು:
ಕಾಮಕಸ್ತೂರಿ ಬೀಜ- 1 ಚಮಚ
ನಿಂಬೆ ಹಣ್ಣು-3
ಹಸಿಮೆಣಸು-3
ಸಕ್ಕರೆ ಪೌಡರ್-4 ಚಮಚ
ಉಪ್ಪು (ಬ್ಲ್ಯಾಕ್ ಸಾಲ್ಟ್)- ಅರ್ಧ ಚಮಚ
ಚಾಟ್ ಮಸಾಲ- ಕಾಲು ಚಮಚ
ಐಸ್ ಕ್ಯೂಬ್-4
ತಂಪು ನೀರು- ಅಗತ್ಯಕ್ಕೆ ತಕ್ಕಷ್ಟು ಇದನ್ನೂ ಓದಿ: ಸಮ್ಮರ್ ಸ್ಪೆಷಲ್ – ಅನನಾಸು, ತೆಂಗಿನಕಾಯಿಯ ಸ್ಮೂದಿ ಮಾಡಿ
ಮಾಡುವ ವಿಧಾನ:
ಮೊದಲಿಗೆ ಕುಲುಕ್ಕಿ ಮಾಡಿಕೊಳ್ಳಲು ಒಂದು ಬೌಲಿಗೆ ಒಂದು ಚಮಚ ಕಾಮಕಸ್ತೂರಿ ಬೀಜವನ್ನು ಹಾಕಿ ಅದಕ್ಕೆ ಕಾಲು ಕಪ್ ನೀರು ಹಾಕಿ 10 ನಿಮಿಷ ನೆನೆಯಲು ಬಿಡಿ. ಬಳಿಕ ಒಂದು ನಿಂಬೆ ಹಣ್ಣನ್ನು ತೆಳ್ಳಗೆ ವೃತ್ತಾಕಾರದಲ್ಲಿ ಹೆಚ್ಚಿಕೊಳ್ಳಿ. ಉಳಿದ 2 ನಿಂಬೆ ಹಣ್ಣನ್ನು ಅರ್ಧ ಮಾಡಿಟ್ಟುಕೊಳ್ಳಿ. ನಂತರ ಒಂದು ಹಸಿಮೆಣಸಿನಕಾಯಿಯನ್ನು ಮಧ್ಯದಲ್ಲಿ ಸೀಳಿಕೊಂಡು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಉಳಿದ ಎರಡು ಹಸಿಮೆಣಸಿನಕಾಯಿಯನ್ನು ತುಂಡಾಗದಂತೆ ಮಧ್ಯ ಮಾತ್ರ ಸೀಳಿಕೊಳ್ಳಿ.
ಬಳಿಕ 2 ಸರ್ವಿಂಗ್ ಗ್ಲಾಸ್ ತೆಗೆದುಕೊಂಡು ಅದಕ್ಕೆ 2 ಚಮಚ ನೆನೆಸಿಟ್ಟಿದ್ದ ಕಾಮಕಸ್ತೂರಿ ಬೀಜವನ್ನು ಸಮವಾಗಿ ಹಾಕಿಕೊಳ್ಳಿ. ಬಳಿಕ ಇದಕ್ಕೆ ವೃತ್ತಾಕಾರದಲ್ಲಿ ಹೆಚ್ಚಿದ್ದ ಒಂದು ನಿಂಬೆ ಹಣ್ಣು, 2 ಚಮಚ ಸಕ್ಕರೆ ಪೌಡರನ್ನು ಎರಡು ಗ್ಲಾಸ್ಗೂ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿಯನ್ನು ಸೇರಿಸಿಕೊಳ್ಳಬೇಕು. ಈಗ ಇದಕ್ಕೆ ಕಾಲು ಚಮಚ ಬ್ಲ್ಯಾಕ್ ಸಾಲ್ಟ್ ಅಥವಾ ಕಲ್ಲುಪ್ಪನ್ನು ಸೇರಿಸಿಕೊಳ್ಳಿ. ನಂತರ ಕಾಲು ಚಮಚ ಚಾಟ್ ಮಸಾಲವನ್ನು ಹಾಕಿಕೊಳ್ಳಿ.
ಬಳಿಕ ಅರ್ಧರ್ಧ ಮಾಡಿದ್ದ ನಿಂಬೆಹಣ್ಣಿನ ರಸವನ್ನು ತೆಗೆದು ಯಾವುದಾದರೂ ಒಂದು ಗ್ಲಾಸ್ಗೆ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಎರಡೆರಡು ಐಸ್ ಕ್ಯೂಬ್ ಗಳನ್ನು ಎರಡೂ ಗ್ಲಾಸಿಗೂ ಹಾಕಿಕೊಳ್ಳಬೇಕು. ನಂತರ ಗ್ಲಾಸಿನ ಅರ್ಧದಷ್ಟು ತಂಪಾದ ನೀರನ್ನು 2 ಗ್ಲಾಸ್ಗೆ ಹಾಕಿಕೊಳ್ಳಿ.
ನಂತರ ಇದಕ್ಕೆ ಮಧ್ಯ ಸೀಳಿಟ್ಟಿದ್ದ ಹಸಿಮೆಣಸಿನಕಾಯಿಯನ್ನು ಎರಡಕ್ಕೂ ಒಂದೊಂದರಂತೆ ಹಾಕಿಕೊಳ್ಳಬೇಕು. ಬಳಿಕ ಈ ಗ್ಲಾಸ್ಗೆ ಇನ್ನೊಂದು ಗ್ಲಾಸ್ ಮುಚ್ಚಿ ಚನ್ನಾಗಿ ಶೇಕ್ ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ಎಲ್ಲಾ ಫ್ಲೇವರ್ಗಳು ಸರಿಯಾಗಿ ಹೊಂದಿಕೊಳ್ಳುತ್ತವೆ. ಅದೇ ರೀತಿಯಾಗಿ ಇನ್ನೊಂದು ಗ್ಲಾಸ್ ಕೂಡಾ ಮಾಡಿಕೊಳ್ಳಿ. ಬಳಿಕ ತಂಪಾದ ನೀರಿನಿಂದ ಗ್ಲಾಸ್ ಫುಲ್ ಮಾಡಿಕೊಳ್ಳಿ. ಇಲ್ಲಿಗೆ ಕುಲುಕ್ಕಿ ಶರ್ಬತ್ ಕುಡಿಯಲು ರೆಡಿ. ಈ ಬೇಸಿಗೆಯಲ್ಲಿ ಕುಲುಕ್ಕಿ ಶರ್ಬತ್ ನಂಬರ್ ಒನ್ ರಿಫ್ರೆಶಿಂಗ್ ಡ್ರಿಂಕ್.