ಮೈಸೂರು: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ನನ್ನು ಬಂಧಿಸಬೇಕು. ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಹಲವಾರು ಸಂಘಟನೆಗಳ ಮುಖಂಡರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಒಲಂಪಿಕ್ ಪದಕ ವಿಜೇತರು, ವಿಶ್ವ ಚಾಂಪಿಯನ್ ಕುಸ್ತಿ ಪಟುಗಳು ಸೇರಿದಂತೆ ದೇಶದ ಗೌರವಾನ್ವಿತ ಕ್ರೀಡಾಪಟುಗಳು ಕಳೆದ ಒಂದು ತಿಂಗಳಿನಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಕಿರುಕುಳ ನೀಡಿರುವ ಬಿಜೆಪಿ ಸಂಸದನನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, “ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಸುಪ್ರೀಕೋರ್ಟ್ ಮಧ್ಯ ಪ್ರವೇಶ ನಂತರ ಎಫ್ಐಆರ್ ದಾಖಲಿಸಲಾಗಿದೆ. ಪೋಕ್ಸೋ ಪ್ರಕರಣ ದಾಖಲಾಗಿದ್ದರೂ, ಇನ್ನೂ ಆತನನ್ನು ಬಂಧಿಸಲಾಗಿಲ್ಲ. ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ.
“ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಕೇಂದ್ರ ಸರ್ಕಾರ, ತನ್ನ ಪೊಲೀಸ್ ಪಡೆಗಳನ್ನು ಬಳಸಿ ನ್ಯಾಯಕ್ಕಾಗಿ ಪ್ರತಿಭಟನೆ ನಿರತ ಕ್ರೀಡಾಪಟುಗಳ ಮೇಲೆ ಧಮನಕಾರಿ ನಡುವಳಿಕೆ ತೋರಿಸಿದೆ. ‘ಭೇಟಿ ಬಚಾವೋ; ಭೇಟಿ ಪಡಾವೋ’ ಎಂದು ಪ್ರಚಾರ ಮಾಡುವ ಪ್ರಧಾನಿ ಮೋದಿ ಅವರ ಸರ್ಕಾರ ಆರೋಪಿ ಬಿಜೆಪಿ ಸಂಸದನ ರಕ್ಷಣೆಗೆ ನಿಂತಿರುವುದು ನಾಚಿಕೇಡಿನ ಸಂಗತಿ” ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆಯಲ್ಲಿ ಹೊಸಕೋಟೆ ಬಸವರಾಜ್, ಪ್ರೊ ಭಗವಾನ್, ಪತ್ರಕರ್ತರಾದ ಟಿ ಗುರುರಾಜ್, ಪುನೀತ್ ಎಸ್, ಬಸವರಾಜು ಹೆಚ್ ಎಂ, ಬೆಳ್ಳಾಳೆ ಬೆಟ್ಟೆಗೌಡ, ಪಿ ಮರಂಕಯ್ಯ, ಮಹಾದೇವ ನಾಯಕ, ಬೆಂಕಿಪುರ ಚಿಕ್ಕಣ್ಣ, ವೆಂ ವನಜ,ಸೀಮಾ,ನೀತು,ಶಂಭುಲಿಂಗ ಸ್ವಾಮಿ, ಮಂಡಕಳ್ಳಿ ಮಹೇಶ್ ಸೇರಿದಂತೆ ಹಲವು ಹೋರಾಟಗಾರರು ಭಾಗಿಯಾಗಿದ್ದರು.