ಉಡುಪಿ: ಸುಮಾರು 19 ತಿಂಗಳಿಗೊಮ್ಮೆ ಸಂಜೆಯ ಪಶ್ಚಿಮ ಆಕಾಶದಲ್ಲಿ ಶೋಭಿಸುವ ಶುಕ್ರ ಗ್ರಹ ಮೇ 30ರಿಂದ ಭೂಮಿಗೆ ಸಮೀಪಿಸುತ್ತಿದ್ದಂತೆ ತನ್ನ ಪ್ರಭೆ ಹೆಚ್ಚಿಸಿಕೊಳ್ಳುತ್ತಿದ್ದು, ಜು.7 ರಂದು ಅತೀ ಹೆಚ್ಚಿನ ಪ್ರಭೆಯಲ್ಲಿ ಕಂಗೊಳಿಸಲಿದೆ.
ಮೇ 30ರಿಂದ ಜುಲೈ ಅಂತ್ಯದವರೆಗೂ ಹೊಳೆಯುತ್ತಾ ಆಗಷ್ಟ್. 8 ರಿಂದ 19 ರವರೆಗೆ ಸೂರ್ಯನಿಗೆ ನೇರ ಬಂದಾಗ ಕಾಣದಾಗುತ್ತದೆ. ಇದನ್ನು ‘ಅಸ್ತ’ ಎನ್ನುವರು. ಸೂರ್ಯನಿಂದ ಶುಕ್ರ ಗ್ರಹ ಸುಮಾರು 11 ಕೋಟಿ ಕಿ.ಮೀ. ದೂರದಲ್ಲಿದ್ದು, 19 ತಿಂಗಳಿಗೊಮ್ಮೆ ಅತೀ ಸಮೀಪಕ್ಕೆ ಅಂದರೆ 4 ಕೋಟಿ ಕಿ.ಮೀ.(ಆ.13ರಂದು ಇನ್ಫೀರಿಯರ್ ಕಂಜಂಕ್ಷನ್) ಸನಿಹ ಬರಲಿದೆ. ನಂತರ 2025ರ ಜನವರಿಯಲ್ಲಿ ಅತ್ಯಂತ ದೂರ ಅಂದರೆ 26 ಕೋಟಿ ಕಿ.ಮೀ.(ಸುಪೀರಿಯರ್ ಕಂಜಂಕ್ಷನ್) ಸಾಗಲಿದೆ. ಪ್ರಸ್ತುತ ಶುಕ್ರ ಈಗ ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿದ್ದು, ಆ.8 ರ ಹೊತ್ತಿಗೆ 4 ಕೋಟಿ ಕಿ.ಮೀ.ನಷ್ಟು ಸಮೀಪಿಸಲಿದೆ.
ಗ್ರಹಗಳಲ್ಲಿ ಬರೀ ಗಣ್ಣಿಗೆ ಶುಕ್ರನೇ ಚೆಂದ. ಸುಮಾರು ಶೇ.95ರಷ್ಟು ಇಂಗಾಲದ ಆಕ್ಸೈಡ್, ಸ್ವಲ್ಪ ರಂಜಕದ ಡೈಆಕ್ಸೈಡ್ನಿಂದ ಕೂಡಿರುವ ಈ ಗ್ರಹ ಅತೀ ಹೆಚ್ಚು ಸೂರ್ಯನ ಬೆಳಕನ್ನು ಪ್ರತಿಫಲಿಸುವುದರಿಂದ ಫಳ ಫಳ ಹೊಳೆಯುತ್ತದೆ. ದೂರದರ್ಶಕದಲ್ಲೀಗ ಶುಕ್ರ ಗ್ರಹ ಚೌತಿಯ ಚಂದ್ರನಂತೆ ಕಾಣುತ್ತದೆ. ಜುಲೈ ಕೊನೆಯ ವಾರದಲ್ಲಿ ಬಿದಿಗೆ ಚಂದ್ರನಿಗಿಂತ ಕ್ಷೀಣವಾಗಿ ಕಾಣಲಿದೆ ಎಂದು ಉಡುಪಿಯ ಖಗೋಳ ತಜ್ಞ ಡಾ. ಎ.ಪಿ. ಭಟ್ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿ
ಘನರೂಪದಲ್ಲಿರುವ ಶುಕ್ರ ಗ್ರಹವು, ಭೂಮಿಯ ಗಾತ್ರ ಮತ್ತು ರಚನೆಯನ್ನು ಹೋಲುವುದರಿಂದ ಇದನ್ನು ಭೂಮಿಯ “ಸಹೋದರ ಗ್ರಹ”ವೆಂದೂ ಕರೆಯಲಾಗುತ್ತದೆ. ಶುಕ್ರವು ಚೆನ್ನಾಗಿ ಬೆಳಕನ್ನು ಪ್ರತಿಫಲಿಸುವ ಮೋಡಗಳಿಂದ ಆವೃತವಾಗಿದ್ದು, ಅದರ ಮೇಲ್ಮೈ ಸೂರ್ಯನ ಬೆಳಕಿರುವಾಗ ಕಾಣುವುದಿಲ್ಲ. ಮುಖ್ಯವಾಗಿ ಇಂಗಾಲದ ಡೈ ಆಕ್ಸೈಡ್ ಅನ್ನು ಒಳಗೊಂಡ ಶುಕ್ರದ ವಾಯುಮಂಡಲ ಘನರೂಪಿ ಗ್ರಹಗಳಲ್ಲೇ ಅತಿ ದಟ್ಟವಾಗಿದೆ. ಶುಕ್ರದ ಮೇಲ್ಮೈಯಲ್ಲಿ ವಾಯು ಒತ್ತಡ ಭೂಮಿಯ ಮೇಲಿನ ಒತ್ತಡಕ್ಕಿಂತ 90 ಪಟ್ಟು ಅಧಿಕ.
ಇದು ಸೂರ್ಯನಿಗೆ ಎರಡನೇ ಅತಿ ಹತ್ತಿರದ ಗ್ರಹ. ಸೂರ್ಯನನ್ನು 224.7 ಭೂಮಿಯ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. ಚಂದ್ರನ ನಂತರ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ಕಾಯ ಶುಕ್ರ ಗ್ರಹ. 47.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ನೀಳತೆಯನ್ನು ಹೊಂದಿರುವ ಶುಕ್ರಗ್ರಹವು ಮುಂಜಾನೆ ಹಾಗೂ ಮುಸ್ಸಂಜೆಗಳಲ್ಲಿ ಚೆನ್ನಾಗಿ ಕಾಣುತ್ತದೆ. ಶುಕ್ರ ಗ್ರಹವನ್ನು “ಹಗಲು ನಕ್ಷತ್ರ” ಮತ್ತು “ಸಂಜೆ ನಕ್ಷತ್ರ” ಎಂದೂ ಕರೆಯಲಾಗುತ್ತದೆ.
ಗಾತ್ರದಲ್ಲಿ ಸುಮಾರು ಭೂಮಿಯಷ್ಟೇ ಇದೆ. ತನ್ನ ಅಕ್ಷದ ಮೇಲೆ ಬುಧ ಗ್ರಹಕ್ಕಿಂತ ನಿಧಾನವಾಗಿ ಸುತ್ತುವ ಇದರ 1 ದಿನ ಭೂಮಿಯ 243 ದಿನಕ್ಕೆ ಸಮಾನ.ಇದು ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ.ಇದರ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚಾಗಿರುವುದರಿಂದ ಈ ಗ್ರಹದಲ್ಲಿ ಜೀವಿಗಳು ಇಲ್ಲ. ಇದರ ಮೇಲ್ಮೈ ಸೀಸವನ್ನೂ ಕರಗಿಸಬಲ್ಲಷ್ಟು ಶಾಖದಿಂದ ಕೂಡಿದೆ.