ಮಂಡ್ಯ:- ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ ನಟ ಡಾಲಿ ಧನಂಜಯ್ ಬೇಸಿಗೆ ರಜೆ ಮುಗಿಸಿ ಶಾಲೆಗೆ ಬಂದ ಮಕ್ಕಳಿಗೆ ಗುಲಾಬಿ ಹೂ ಮತ್ತು ಚಾಕ್ಲೇಟ್ ನೀಡಿ ಸ್ವಾಗತ ಕೋರಿದ್ದಾರೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಡಾಲಿ ಧನಂಜಯ್ ಬಂದು ಮೊದಲಿಗೆ ನವೀಕರಣ ಮಾಡಿರುವ ಶಾಲೆಯ ಕಟ್ಟಡವನ್ನು ಟೇಪ್ ಕತ್ತರಿಸಿ ಉದ್ಘಾಟನೆ ಮಾಡಿದರು. ಬಳಿಕ ಶಾಲೆ ಕಟ್ಟಡವನ್ನು ಒಂದು ರೌಂಡ್ ಹೊಡೆದರು. ಬಳಿಕ ಮಕ್ಕಳಿಗೆ ಗುಲಾಬಿ ಹೂ, ಚಾಕ್ಲೇಟ್ ನೀಡಿ ವೆಲ್ಕಮ್ ಮಾಡಿದರು, ಈ ವೇಳೆ ಧನಂಜಯ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಾಥ್ ನೀಡಿದರು.
ಬಳಿಕ ಮಾತನಾಡಿದ ಧನಂಜಯ್, ಸರ್ಕಾರಿ ಶಾಲೆಗೆ ಬಂದು ನನಗೆ ತುಂಬಾ ಖುಷಿ ಆಯ್ತು. ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಸವಲತ್ತುಗಳು ಇರಲ್ಲ ಸಾಕಷ್ಟು ಮಕ್ಕಳು ಶಾಲೆಯಿಂದ ಬಿಟ್ಟು ಹೋಗ್ತಾರೆ. ಅವರನ್ನು ಮತ್ತೆ ಶಾಲೆಗೆ ಕರೆತರೋದು ಸರ್ಕಾರಿ ಶಾಲೆಯ ಶಿಕ್ಷಕರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೂಲಸೌಕರ್ಯಗಳು ಇಲ್ಲದೆ ಮುಚ್ಚಬಾರದು. ಸರ್ಕಾರಿ ಶಾಲೆಯಲ್ಲಿ ಓದ ಬೇಕೆಂದು ತುಂಬಾ ಜನ ಅಂದುಕೊಂಡಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚಬಾರದು ಓದಿಗೆ ದೊಡ್ಡ ಶಾಲೆ ಸರ್ಕಾರಿ ಶಾಲೆ ಅಂತಾ ಇಲ್ಲ. ಈ ರೀತಿಯ ಮಾದರಿ ಶಾಲೆಗಳು ಎಲ್ಲಾ ಹಳ್ಳಿಗಳಲ್ಲೂ ಇರಬೇಕು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಈ ಕಾರ್ಯಕ್ರಮ ಶ್ಲಾಘನೀಯವಾದದ್ದು. ಶಿಕ್ಷಕರು ನನ್ನ ಶಾಲೆ ಎಂದು ಅಂದುಕೊಂಡು ಕೆಲಸ ಮಾಡಿದರೆ, ಇದರಿಂದ ಸರ್ಕಾರಿ ಶಾಲೆಗಳು ಉತ್ತಮವಾಗುತ್ತವೆ. ಎಲ್ಲಾ ಕಡೆ ಕೆಲಸ ಕದಿಯೋರು ಇರ್ತಾರೆ, ಕೆಲಸವನ್ನ ಪ್ರೀತಿಯಿಂದ ಮಾಡೋರು ಇರ್ತಾರೆ. ಕೆಲಸವನ್ನ ಪ್ರೀತಿಯಿಂದ ಮಾಡೋರನ್ನು ಉದಾಹರಣೆ ತೆಗೆದುಕೊಳ್ಳಬೇಕು ಎಂದು ಡಾಲಿ ಮಾತನಾಡಿದ್ದಾರೆ.