ಚಾಮರಾಜನಗರ: `ಶಕ್ತಿ’ ಯೋಜನೆ ಪರಿಣಾಮ ಹಾಗೂ ಮಣ್ಣೆತ್ತಿನ ಅಮಾವಾಸ್ಯೆ ದಿನವಾದ ಭಾನುವಾರ ಇಲ್ಲಿನ ಪ್ರಸಿದ್ಧ ಮಲೆ ಮಹದೇಶ್ವರಸ್ವಾಮಿ ದೇವಾಲಯಕ್ಕೆ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಇದರಲ್ಲಿ ಸಿಂಹಪಾಲು ಮಹಿಳೆಯರೇ ಇದ್ದರು.
ಪ್ರತಿ ಅಮಾವಾಸ್ಯೆಯಂದು ಭೇಟಿ ನೀಡುವ ಭಕ್ತರ ಸಂಖ್ಯೆಗೆ ಹೋಲಿಸಿದರೆ, ಭಾನುವಾರ ಹತ್ತು ಪಟ್ಟು ಹೆಚ್ಚು ಬಂದಿದ್ದರು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ಸೌಕರ್ಯ, ದಾಸೋಹ ವ್ಯವಸ್ಥೆ ಮಾಡಲು ಹರಸಾಹಸ ಪಡಬೇಕಾಯಿತು. ಭಕ್ತರು ದೇವರ ದರ್ಶನಕ್ಕೆ ಹಾಗೂ ದಾಸೋಹಕ್ಕೆ ಗಂಟೆಗಟ್ಟಲೆ ಕಾಯಬೇಕಾಯಿತು. ಹಲವರು ಕಾಯಲಾಗದೆ ಬೇಸತ್ತು ವಾಪಸ್ ತೆರಳಿದರು. ಬೆಟ್ಟದ ವ್ಯಾಪ್ತಿಯಲ್ಲಿ ಹೆಚ್ಚು ಹೋಟೆಲ್ ಇಲ್ಲದ ಕಾರಣ ಊಟ?ಉಪಾಹಾರಕ್ಕೆ ಪ್ರಯಾಸ ಪಡಬೇಕಾಯಿತು.
ಕಾಡಿದ ಬಸ್ ಕೊರತೆ: ಕೆಎಸ್ಆರ್ಟಿಸಿಯು 150 ಹೆಚ್ಚುವರಿ ಬಸ್ಗಳನ್ನು ಹಾಕಿತ್ತಾದರೂ ಸಾಲಲಿಲ್ಲ. ಮತ್ತೆ 60 ಬಸ್ಗಳ ಕಾರ್ಯಾಚರಣೆ ನಡೆಸಿತು. ಅವೂ ಸಾಲದೆ ಜನರು ನಿಲ್ದಾಣಗಳಲ್ಲಿ ಕಾಯಬೇಕಾಯಿತು. ಬಸ್ಗಳಲ್ಲೂ ನೂಕುನುಗ್ಗಲು ಕಂಡುಬAತು. `ಶಕ್ತಿ’ ಪರಿಣಾಮ ಕಳೆಗುಂದಿದ್ದ ಖಾಸಗಿ ಬಸ್ಗಳಲ್ಲೂ ಪ್ರಯಾಣಿಕರು ಕಂಡುಬAದರು.
ಸರದಿ ಸಾಲಿನಲ್ಲಿ ಬೆಳಿಗ್ಗೆ ನಿಂತವರು ದರ್ಶನ ಮುಗಿಸಿ ಹೊರಬರುವುದರೊಳಗೆ ಮಧ್ಯಾಹ್ನ ಕಳೆದಿತ್ತು. ರೂ.500, ರೂ.300, ರೂ.200 ಟಿಕೆಟ್ ಪಡೆದವರಿಗೆ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಒಂದು ಗಂಟೆವರೆಗೆ ರೂ.500 ಟಿಕೆಟ್ ಮಾರಲಾಗಿದ್ದು, ಇದರಿಂದ ?23 ಲಕ್ಷ ಆದಾಯ ಬಂದಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.
`ಜಾತ್ರೆ ಸಮಯದಲ್ಲಿ ಈ ಪ್ರಮಾಣದಲ್ಲಿ ಭಕ್ತರು ಸೇರುತ್ತಾರೆ. ಆದರೆ, ಅಮಾವಾಸ್ಯೆಯಂದು ಇಷ್ಟೊಂದು ಸಂಖ್ಯೆಯಲ್ಲಿ ಬಂದಿರಲಿಲ್ಲ. ಭಾನುವಾರ 2.5 ಲಕ್ಷದಿಂದ 3 ಲಕ್ಷ ಭಕ್ತರು ಬಂದಿದ್ದಾರೆ ‘ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ `ಪ್ರಜಾವಾಣಿ’ಗೆ ತಿಳಿಸಿದರು.