ಛತ್ತೀಸ್ಗಢ: ಇತ್ತೀಚೆಗೆ ಮಕಕ್ಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್ ಬಳಕೆಯಾಗುತ್ತಿದೆ. ಈ ಮೊಬೈಲ್ ಬಳಕೆಯನ್ನು ಮಕ್ಕಳು ಅತಿಯಾಗಿ ಮಾಡಿದರೆ ಪೋಷಕರು ಬುದ್ಧಿ ಮಾತು ಹೇಳುವುದು ಸಹಜ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಮಕ್ಕಳು ತಪುö್ಪ ನಿರ್ಧಾರ ತೆಗೆದುಕೊಳ್ಳುವ ಘಟನೆ ಈ ಹಿಂದೆಯೂ ನಡೆದಿದೆ. ಇಂಥದ್ದೇ ಘಟನೆಯೊಂದು ಇದೀಗ ಛತ್ತೀಸ್ಗಢದಲ್ಲಿಯೂ ನಡೆದಿದೆ.
ಹೌದು. ಛತ್ತೀಸ್ಗಢದ ಬಸ್ತರ್ನಲ್ಲಿ ಯುವತಿಯೊಬ್ಬಳಿಗೆ ಆಕೆಯ ಪೋಷಕರು ಮೊಬೈಲ್ ಜಾಸ್ತಿ ಬಳಕೆ ಮಾಡದಂತೆ ಬುದ್ಧಿ ಮಾತು ಹೇಳಿದ್ದಾರೆ. ಇಷ್ಟಕ್ಕೆ ಬೇಸರಗೊಂಡ ಆಕೆ 90 ಅಡಿ ಆಳದ ಚಿತ್ರಕೋಟೆ ಜಲಪಾತಕ್ಕೆ ಧುಮುಕಿದ್ದಾಳೆ.
ಜಲಪಾತದ ಬಳಿಗೆ ಬಂದ ಬಳಿಕ ಯುವತಿ ಸ್ವಲ್ಪ ಹೊತ್ತು ಆ ಕಡೆ ಈ ಕಡೆ ಅಲೆದಾಡುತ್ತಿದ್ದಳು. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ಆಕೆಯನ್ನು ಅಲ್ಲಿಂದ ರಕ್ಷಣೆ ಮಾಡಲು ಮನವಿ ಮಾಡಿದರು. ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಆಕೆಗೂ ಒತ್ತಾಯಿಸಿದರು. ಆದರೆ ಅವರ ಮಾತುಗಳನ್ನು ಯುವತಿ ಕೇಳಿಸಿಕೊಳ್ಳದೇ ಒತ್ತಡಕ್ಕೆ ಒಳಗಾದವಳಂತೆ ಓಡಾಡುತ್ತಿದ್ದಳು.
ಇತ್ತ ಸ್ಥಳದಲ್ಲಿದ್ದ ಕೆಲವು ಯುವಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ಇಡೀ ಘಟನೆಯ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕೂಡಲೇ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಈ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.
ವೈರಲ್ ವೀಡಿಯೋದಲ್ಲಿ ಯುವತಿ ಜಲಪಾತದ ತುದಿಯಲ್ಲಿ ಕೆಲವು ಸೆಕೆಂಡುಗಳ ಕಾಲ ನಿಂತಿರುವುದನ್ನು ಕಾಣಬಹುದಾಗಿದೆ. ಕ್ಯಾಮೆರಾ ಚಲಿಸುತ್ತಿದ್ದಂತೆ, ಇಂದ್ರಾವತಿ ನದಿಯ ಬಸ್ತರ್ನಲ್ಲಿರುವ ಜಗದಲ್ಪುರದಿಂದ 38 ಕಿಮೀ ದೂರದಲ್ಲಿರುವ ಚಿತ್ರಕೋಟೆ ಜಲಪಾತದ ಎತ್ತರವನ್ನು ವೀಡಿಯೊ ತೋರಿಸುತ್ತದೆ. ಇದನ್ನು ಸ್ಥಳೀಯರು `ಮಿನಿ ನಯಾಗರಾ ಫಾಲ್ಸ್’ ಎಂದು ಕರೆಯುತ್ತಾರೆ. ಯುವತಿ ಜಿಗಿದ ಬಳಿಕ ನೀರಿನಲ್ಲಿ ತೇಲುತ್ತಿದ್ದಳು. ಕೂಡಲೇ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದು, ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬಾಲಕಿಯನ್ನು ಆಕೆಯ ಪೋಷಕರು ಗದರಿಸಿದ್ದಾರೆ. ಈ ಕಾರಣಕ್ಕೆ ಆಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಯುವತಿಯ ರಕ್ಷಣೆಯ ಬಳಿಕ ಆಕೆಯ ಮನೆಯವರಿಗೆ ಒಪ್ಪಿಸಲಾಯಿತು.
ಚಿತ್ರಕೋಟೆ ಜಲಪಾತವು ತನ್ನ ಮೋಡಿಮಾಡುವ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಮಳೆಗಾಲದಲ್ಲಿ ಪ್ರತಿದಿನ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದಾಗ್ಯೂ, ಪ್ರವಾಸಿಗರಿಗೆ ಯಾವುದೇ ಗಮನಾರ್ಹ ಸುರಕ್ಷತಾ ಕ್ರಮಗಳಿಲ್ಲ. ದುರದೃಷ್ಟವಶಾತ್, ಈ ಹಿಂದೆ ಹಲವಾರು ಅಪಘಾತಗಳು ಇಲ್ಲಿ ಸಂಭವಿಸಿವೆ.