ಅನ್ಯ ಪಂಚಾಯ್ತಿಗೆ ಅತಿಕ್ರಮಿಸಿ ಅಕ್ರಮದಲ್ಲಿ ತೊಡಗಿದ್ದಾಗ ಸಿಕಿಬಿದ್ದ ಕಾರ್ಯದರ್ಶಿ ವೆಂಕಟೇಶ್
ಹನೂರು. ನಿರ್ಗಮಿತ ಕಾರ್ಯದರ್ಶಿ ಒಬ್ಬರು ಹಿಂದೆ ಇದ್ದ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಯೋಜನೆಯಲ್ಲಿ ನಡೆಸಿರುವ ಅವ್ಯವಹಾರವನ್ನು ಮುಚ್ಚಿ ಹಾಕಲು ರಜಾ ದಿನವಾದ ಕಳೆದ ಭಾನುವಾರ ಅಕ್ರಮವಾಗಿ ಪಂಚಾಯ್ತಿ ಕಛೇರಿಯನ್ನು ಅತಿಕ್ರಮಿಸಿ ಅಲ್ಲಿನ ಕಂಪ್ಯೂಟರ್ ಅಪರೇಟರ್ನೊದಿಗೆ ಶಾಮೀಲಾಗಿ ಕಡತಗಳ ಅಕ್ರಮ ಪರಿಶೀಲನೆ ಹಾಗೂ ಕಂಪ್ಯೂಟರ್ ಅನ್ನು ದುರ್ಬಳಕೆ ಮಾಡಿಕೊಂಡು ದಾಖಲೆಗಳನ್ನು ತಿದ್ದುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ತರ ಕೈಗೆ ಸಿಕ್ಕಿಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹನೂರು ತಾಲ್ಲೂಕಿನ ಚಿಕ್ಕಮಾಲಾಪುರ ಪಂಚಾಯತಿಯಲ್ಲಿ ಹಾಲಿ ಕಾರ್ಯದರ್ಶಿ ಆಗಿರುವ ವೆಂಕಟೇಶ್ರವರೇ ಈ ಹಿಂದೆ ಕರ್ತವ್ಯ ನಿರ್ವಹಿಸಿ ನಿರ್ಗಮಿಸಿದ್ದ ಶೆಟ್ಟಳ್ಳಿ ಗ್ರಾಮ ಪಂಚಾಯತಿ ಕಛೇರಿಗೆ ಭಾನುವಾರ ಅಕ್ರಮವಾಗಿ ನುಗ್ಗಿ ಪಿಡಿಓ ಕಛೇರಿ ಹಾಗೂ ಸರ್ಕಾರಿ ದಾಖಲೆಗಳು ಇರುವ ಅಲ್ಮೆರಾದ ಬೀಗ ತೆಗೆದು ತನಗೆ ಬೇಕಾದ ನಾನಾ ಕಡತಗಳನ್ನು ಹೊರ ತೆಗೆದು ಕಡತಗಳ ಪರಿಶೀಲನೆ ಹಾಗು ಅಲ್ಲಿನ ಕಂಪ್ಯೂಟರ್ ಅಪರೇಟರ್ ಆನಂದ್ನನ್ನು ದುರ್ಬಳಕೆ ಮಾಡಿಕೊಂಡು ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನರೇಗಾ ಯೋಜನೆಯಲ್ಲಿ ಮಾಡಿದ್ದ ಅಕ್ರಮಗಳನ್ನು ಮುಚ್ಚಿ ಹಾಕಲು ದಾಖಲೆಗಳನ್ನು ತಿದ್ದಿ ಅಕ್ರಮವಾಗಿ ಕಂಪ್ಯೂಟರ್ಗೆ ದಾಖಲಿಸುತ್ತಿರುವುದನ್ನು ಕಂಡ ಗ್ರಾಮದ ಆರ್ಟಿಐ ಕಾರ್ಯಕರ್ತ ವೆಂಕಟೇಶ್ ಮತ್ತಿತರರು ಹಠಾರ್ತನೆ ಕಚೇರಿಗೆ ದಾವಿಸಿ ಕಾರ್ಯದರ್ಶಿ ವೆಂಕಟೇಶ್ ಹಾಗೂ ಕಂಪ್ಯೂಟರ್ ಅಪರೇಟರ್ ಆನಂದನನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇಲ್ಲಿನ ಅಧಿಕೃತ ಹಾಲಿ ಪಿಡಿಓ ಶಿವಕುಮಾರ್ ಅಮಾನತುಗೊಂಡಿದ್ದು ನೀವು ಇಲ್ಲಿನ ಅಧಿಕೃತ ಪಿಡಿಓ ಅಲ್ಲದಿದ್ದರೂ ಯಾರ ಅನುಮತಿ ಪಡೆದು ಸರ್ಕಾರಿ ರಜಾ ದಿನವಾದ ಭಾನುವಾರ ಪಂಚಾಯತಿ ಕಛೇರಿಯನ್ನು ಅತಿಕ್ರಮಿಸಿ ಅಕ್ರಮವಾಗಿ ಕಡತಗಳನ್ನು ತಮಗಿಷ್ಟ ಬಂದ ಹಾಗೆ ತಿದ್ದಿ ಕಂಪ್ಯೂಟರ್ಗೆ ದಾಖಲಿಸುತ್ತಿದ್ದೀರಿ. ಈ ಅಕ್ರಮಗಳಿಗೆ ನಿಮಗೆ ಅನುಮತಿ ಕೊಟ್ಟದ್ದಾದರು ಯಾರು.? ಎಂದು ತಾರಟೆಗೆ ತೆಗೆದುಕೊಳ್ಳುತ್ತಿದ್ದಂತೆ ತಬ್ಬಿಬ್ಬಾದ ಈ ಇಬ್ಬರು ಸಾವರಿಸಿಕೊಂಡು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ದಾಖಲೆಗಳನ್ನು ಸಲ್ಲಿಸಬೇಕಾಗಿರುವುದರಿಂದ ಹಾಲಿ ಪಿಡಿಓರವರ ಅನುಮತಿ ಪಡೆದೇ ಬಂದಿರುವುದಾಗಿ ಏನೇನೋ ಸಬೂಬು ಹೇಳಿ ನುಣುಚಿಕೊಳ್ಳಲು ಯತ್ನಿಸಿದರಾದರೂ ಜನರ ತರಾಟೆಯಿದ ಹೆದರಿ ಕೆಲ ಕಾಲ ಏನೇನೋ ಮಾಡಿ ನಂತರ ಬಾಗಲು ಹಾಕಿಕೊಂಡು ಕಾಲು ಕಿತ್ತಿದ್ದಾರೆ.
ಈ ಎಲ್ಲಾ ಘಟನಾವಳಿಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡ ಆರ್ಟಿಐ ಕಾರ್ಯಕರ್ತ ವೆಂಕಟೇಶ್ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿರುವರಲ್ಲದೆ ಜಿ.ಪಂ. ಹಾಗೂ ತಾ.ಪಂ.
ಅಧಿಕಾರಿಗಳಿಗೆ ಈ ಅಕ್ರಮದ ಬಗೆಗಿನ ವಿಡಿಯೋ ಸಮೇತ ದೂರು ನೀಡಿದ್ದರೂ ಈತನ ಯಾರ ವಿರುದ್ದವೂ ಕ್ರಮಕ್ಕೆ ಮುಂದಾಗದ ಜಿ.ಪಂ. ಹಿರಿಯ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಕರ್ತವ್ಯಲೋಪ ಎದ್ದು ಕಾಣುತ್ತಿದ್ದು ಇವರುಗಳೂ ಸಹ ಅಕ್ರಮದಲ್ಲಿ ಭಾಗಿಗಳಾಗಿ ಪಾಲು ಪಡೆಯುತ್ತಿರುವುದರಿಂದಲೇ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲವಾದ್ದರಿಂದಲೇ ಪದೇ ಪದೇ ಇಂತಹುದೇ ಹತ್ತರು ಹಲವಾರು ಅಕ್ರಮಗಳು ಪುನರಾವರ್ತನೆಯಾಗುತ್ತಿವೆ ಎಂದು ಆರೋಪಿಸಿರುವ ಪ್ರಜ್ಞಾವಂತ ನಾಗರೀಕರು ವ್ಯಾಪಕ ಚರ್ಚೆಯಲ್ಲಿ ತೊಡಗಿದ್ದಾರೆ.
ಇತ್ತಿಚೆಗೆ ಹನೂರು ತಾಲ್ಲೂಕಿನಾದ್ಯಂತದ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆಯಲ್ಲಿ ನಡೆಸಿರುವ ಅಕ್ರಮ ಅವ್ಯವಹಾರಗಳು ಗಬ್ಬೆದ್ದು ನಾರಿ ಭುಗಿಲೆದ್ದು ಪುಂಖಾನುಪುಂಕವಾಗಿ ಹೊರ ಬರುತ್ತಿದ್ದು ಅನೇಕ ಪಂಚಾಯತಿಯ ಹಗರಣಗಳು ಸಾಕ್ಷಾಧ್ಯಾರ ಸಮೇತ ಬೆಳಕಿಗೆ ಬಂದಿದ್ದರೂ ಸಂಬಂಧಿಸಿದ ತಪ್ಪಿತಸ್ತ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಜಿ.ಪಂ. ಹಾಗೂ ತಾ.ಪಂ.ನ ಹಿರಿಯ ಅಧಿಕಾರಿಗಳು ಮುಂದಾಗದೆ ಮೀನ-ಮೇಷ ಎಣಿ ಸುತ್ತಿರುವುದು ನಾನಾ ಸಂಶಯಗಳಿಗೆ ಆಸ್ಪದ ನೀಡಿದೆ.
ಈಗಲಾದರೂ ಅಕ್ರಮವೆಸಗಿರುವ ಕಾರ್ಯದರ್ಶಿ ವೆಂಕಟೇಶ್ ಹಾಗೂ ಈ ಹಿಂದೆ ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿ ಸಾಕ್ಷಾಧ್ಯಾರ ಸಮೇತ ಸಿಕ್ಕಿಬಿದ್ದಿದ್ದರೂ ಯಾವುದೇ ಶಿಕ್ಷೆಗೊಳಗಾಗದೆ ಅದೇ ಅಕ್ರಮ ಪ್ರವೃತ್ತಿಯಲ್ಲಿ ಮುಂದುವರೆದಿರುವ ಕಂಪ್ಯೂಟರ್ ಅಪರೇಟರ್ ಆನಂದನ ವಿರುದ್ದ ಶಿಸ್ತು ಕ್ರಮ ಕೈಗೊಂಡು ಸೇವೆಯಿಂದ ವಜಾಮಾಡಿ ಕ್ರಮಿನಲ್ ಪ್ರಕರಣ ದಾಖಲಿಸುವಂತೆ ಗ್ರಾಮಸ್ತರು ದೂರಿನಲ್ಲಿ ಕೋರಿದ್ದಾರೆ.