ಬೆಂಗಳೂರು: ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿದೆ. ಪೊಲೀಸರು ತಕ್ಷಣ ರಾಜಭವನದಲ್ಲಿ ಪರಿಶೀಲನೆ ನಡೆಸಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಗೊತ್ತಾಗಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಧಾನಸೌಧ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಸೋಮವಾರ (ಡಿ.11)ರ ರಾತ್ರಿ 11.30ರ ಸುಮಾರಿಗೆ ರಾಜ ಭವನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಅಪರಿಚಿತರು ಕರೆ ಮಾಡಿದ್ದಾರೆ. ರಾಜ ಭವನ ಭದ್ರತಾ ಅಧಿಕಾರಿಗಳು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಧಾವಿಸಿದ್ದಾರೆ. ಹಲವು ಗಂಟೆಗಳ ಕಾಲ ಪರಿಶೀಲಿಸಿದ ಬಳಿಕ, ಇದು ಹುಸಿ ಬಾಂಬ್ ಕರೆ ಎಂದು ತಿಳಿದಬಂದಿದೆ.
ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ
ಇತ್ತೀಚಿಗೆ ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಸರಿಯಾಗಿ 12 ದಿವಸದ ಹಿಂದೆ ಡಿಸೆಂಬರ್ 1 ರಂದು ಬೆಂಗಳೂರಿನ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇದು ಶಾಲಾ ಆಡಳಿತ ಮಂಡಳಿಗೆ ಶಾಕ್ ನೀಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತಂಡ ಸ್ಥಳಕ್ಕೆ ದೌಡಾಯಿಸಿದ್ದರು. ಎಲ್ಲ ಶಾಲೆಗಳನ್ನು ಪರಿಶೀಲಿಸಿದ್ದರು. ಆಗ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ತಿಳಿಯಿತು. ಇನ್ನು ವಿಷಯಗೊತ್ತಾಗುತ್ತಿದ್ದಂತೆ ಶಾಲೆಗಳಿಗೆ ತೆರಳಿದ ಪೋಷಕರು ಮಕ್ಕಳನ್ನು ಮನೆಗಳಿಗೆ ಕರೆದುಕೊಂಡು ಬಂದಿದ್ದರು. ಅಂದು ಒಂದು ಶಾಲೆಗಳಿಗೆ ರಜೆ ನೀಡಲಾಗಿತ್ತು.