ಕೊಡಗು:- ಮಡಿಕೇರಿಯ ಜನಪ್ರಿಯ ಪ್ರವಾಸಿ ತಾಣ ರಾಜಾ ಸೀಟ್ನಲ್ಲಿ ಮಾರಾಟಗಾರರಿಗೆ ನಿಷೇಧ ಹೇರಲಾಗಿದೆ. ಹೌದು ಆಶ್ಚರ್ಯವಾದರೂ ಇದು ನಿಜ. ಭಾನುವಾರ ಸಂಜೆ ಈ ಪ್ರದೇಶದಲ್ಲಿ ಇಬ್ಬರು ಸ್ಥಳೀಯರ ನಡುವೆ ನಡೆದ ಗಲಾಟೆಗೆ ನೂರಾರು ಮಂದಿ ಸಾಕ್ಷಿಯಾಗಿದ್ದು, ಇದೇ ಕಾರಣಕ್ಕೆ ಪ್ರವಾಸಿಗರ ನೆಚ್ಚಿನ ತಾಣದಲ್ಲಿ ಹಲವು ಬದಲಾವಣೆಗೆ ಮುನ್ನುಡಿಯಾಗಿದೆ.
ರಾಜಾ ಸೀಟ್ನ ಕಾವಲುಗಾರ ಮತ್ತು ಸ್ಥಳೀಯ ಬೀದಿ ವ್ಯಾಪಾರಿ ನಡುವೆ ಗಲಾಟೆ ನಡೆದಿದ್ದು, ಭಾರೀ ಘರ್ಷಣೆಗೆ ನಡೆದಿದೆ. ಸಂಜೆಯ ಸಮಯದಲ್ಲಿ ವಾಚ್ಮನ್ ಜಯಣ್ಣ ಚಿಪ್ಸ್ ಖರೀದಿಸಲು ರಾಜಾ ಸೀಟ್ನ ಹೊರಗಿನ ಅಂಗಡಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಬೀದಿ ವ್ಯಾಪಾರಿ ಜಮ್ಶಾದ್ ಅವರಿಂದ ಅವರು ಆಲೂಗಡ್ಡೆ ಚಿಪ್ಸ್ ಖರೀದಿಸಿದರು. ಆದರೆ, ಖರೀದಿಸಿದ ಉತ್ಪನ್ನಕ್ಕೆ ಹಣ ನೀಡುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಜಯಣ್ಣ ಅವರ ಪತ್ನಿ ಸುಶೀಲಾ ಕೂಡ ರಾಜಾ ಸೀಟ್ನ ಹೊರಗೆ ಅಂಗಡಿ ನಡೆಸುತ್ತಿದ್ದು, ಇಬ್ಬರ ನಡುವೆ ಜಗಳ ನಡೆಯದಂತೆ ತಡೆಯಲು ಯತ್ನಿಸಿದ್ದಾರೆ. ಆದರೆ, ಜಯಣ್ಣ ಹಾಗೂ ಜಮ್ಶಾದ್ ಇಬ್ಬರು ಪರಸ್ಪರ ಲಾಠಿಯಿಂದ ಹಲ್ಲೆ ನಡೆಸಿಕೊಂಡ ಪರಿಣಾಮ ಗಾಯಗೊಂಡಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ನಡುವೆ ಜಯಣ್ಣನ ಪತ್ನಿ ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಜಮ್ಶಾದ್ ಹಾಗೂ ಮತ್ತೋರ್ವ ಬೀದಿಬದಿ ವ್ಯಾಪಾರಿ ಖಲೀಲ್ ತನ್ನ ಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಜಮ್ಶಾದ್ ಅವರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಗಾಯಾಳು ಜಯಣ್ಣ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯ ನಂತರ ಬೀದಿ ವ್ಯಾಪಾರಿಗಳು ರಾಜಾ ಸೀಟ್ನ ಹೊರಗೆ ನಿತ್ಯ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ. ಪ್ರವಾಸಿ ತಾಣದ ಹೊರಗೆ ಎರಡು ದಶಕಗಳಿಂದ ಅನೇಕ ಮಾರಾಟಗಾರರು ತಮ್ಮ ಜೀವನೋಪಾಯಕ್ಕಾಗಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದು, ಅಲ್ಪಸ್ವಲ್ಪ ಗಳಿಸುತ್ತಿದ್ದಾರೆ. ಇಲ್ಲಿನ ಚುರುಮುರಿ ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಪ್ರವಾಸಿಗರಿಗೆ ಬೀದಿ ಆಹಾರವನ್ನು ಮಾರಾಟ ಮಾಡುತ್ತಾರೆ.