ಹಾಸನ: ಜೂಜು ಆಟದಲ್ಲಿ ಹಣ ಕಳೆದುಕೊಂಡು ಮನೆಯಲ್ಲಿದ್ದ ಮಡದಿ ಒಡವೆಯನ್ನು ಕೂಡ ಮಾರಿ ನಂತರ ತವರು ಮನೆಯಿಂದ ಹಣ ತರುವಂತೆ ಹೆಂಡತಿ ಹೆಚ್.ಎಂ. ರಂಜಿತ ೨೩ ವರ್ಷ ಎಂಬುವರಿಗೆ ಕಿರುಕುಳ ನೀಡಿ ಕೊಲೆ ಮಾಡಿರುವ ಘಟನೆ ಹಾಸನ ನಗರದ ಗುಡ್ಡೆಗೌಡನಹಳ್ಳಿ ಕೊಪ್ಪಲುನಲ್ಲಿ ನಡೆದಿದೆ.
ಅರಕಲಗೂಡು ತಾಲೂಕು ಹೆಂಟಗೆರೆ ಕೊಪ್ಪಲು ಗ್ರಾಮದ ಮಂಜೇಗೌಡ ಎಂಬುವರ ಮಗಳಾದ ಅರ್ಪಿತಾ ರಂಜಿತಾ ಅವರನ್ನು ೨೦೨೨ ಮೇ. ೯ ರಂದು ವಿದ್ಯಾನಗರ ಬಳಿ ಇರುವ ಗುಡ್ಡೇಗೌಡನಹಳ್ಳಿ ಗ್ರಾಮದ ಸ್ವಾಮೀಗೌಡ ಎಂಬುವರ ಮಗ ಯು.ಟಿ. ಪವನ್ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ೨೫೦ ಗ್ರಾಂ. ಚಿನ್ನದ ವಡವೆ ಹಾಗೂ ೨ ಲಕ್ಷ ರೂ. ನಗದು ಹಣ ನೀಡಿದ್ದರು. ಇದಾದ ನಂತರ ೨-೩ ತಿಂಗಳು ರಂಜಿತಾಳನ್ನು ಗಂಡನ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದರು. ನಂತರ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಲು ಪ್ರಾರಂಭಿಸಿದರು ಎನ್ನಲಾಗಿದೆ. ಪವನನಿಗೆ ಇಸ್ಪೀಟ್ ಮತ್ತು ಐಪಿಎಲ್ ಕ್ರಿಕೆಟ್ ಜೂಜಾಡುವ ಹವ್ಯಾಸವಿದ್ದು, ರಂಜಿತಾಳಿಗೆ ಆಗಾಗ್ಗೆ ವರದಕ್ಷಿಣೆ ತರುವಂತೆ ಹೊಡೆದು, ಹೊರಗೆ ಕಳಿಸುತ್ತಿದ್ದ ಎನ್ನಲಾಗಿದೆ. ೨ ತಿಂಗಳ ಹಿಂದೆ ಅಂದರೆ ಕಳೆದ ಮಾ.೧೦ ಅರ್ಪಿತಾ ತವರು ಮನೆಗೆ ಬಂದು, ಗಂಡನ ಮನೆಗೆ ಹೋಗುವುದಿಲ್ಲ, ನನ್ನನ್ನು ಹೊಡೆದು ಸಾಯಿ ಸುತ್ತಾರೆಂದು ಹೇಳಿದ್ದಾಳೆ. ನಂತರ ಸಂಬಂಧಿಕರೆಲ್ಲರೂ ಸೇರಿ ರಾಜಿ ಪಂಚಾಯ್ತಿ ಮಾಡಿ ಸಮಧಾನ ಮಾಡಲಾಗಿತ್ತು. ಆದರೂ ಮೇ ೨ ರಂದು ಮಧ್ಯಾಹ್ನ ರಂಜಿತಳನ್ನು ಗಂಡ ಪವನ್, ಅತ್ತೆ ಮಣಿ, ಮಾವ ತಿಮ್ಮೇಗೌಡ, ಸ್ವಾಮೀಗೌಡ ಎಂಬವರು ಮನ ಬಂದಂತೆ ಹಲ್ಲೆ ಮಾಡಿ ನಂತರದಲ್ಲಿ ಆಸ್ಪತ್ರೆಗೆ ಸೇರಿಸಿದ್ದರು. ಮಂಗಳವಾರ ಸಂಜೆ ೬.೪೫ ರ ಸುಮಾರಿಗೆ ಗಂಭೀರ ಗಾಯಗೊಂಡಿದ್ದ ರಂಜಿತಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ವಿಷಯ ತಿಳಿದ ಮೃತರ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಈಕೆಯ ಸಾವಿಗೆ ಕಾರಣರಾದ ಗಂಡ ಪವನ್, ಅತ್ತೆ ಮಣಿ, ಮಾವ ತಿಮ್ಮೇಗೌಡ ಸ್ವಾಮೀಗೌಡ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಂಬಂಧಿಕರು ಪೆನೆನ್ ಮೊಹಲಾ ಪೊಲೀಸರಿಗೆ ಠಾಣೆಗೆ ದೂರು ದಾಖಲಿಸಿದ್ದಾರೆ.