ಚಾಮರಾಜನಗರ:- ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಹೈಕಮಾಂಡ್ ಬ್ಲಾಕ್ಮೇಲ್ ಮಾಡಿ ಎರಡು ಕಡೆ ಟಿಕೆಟ್ ಪಡೆದಿಕೊಂಡಿದ್ದಾರೆ.
ಅವರು ತಾಕತ್ ಇದ್ದರೆ ವರುಣಾ ಕ್ಷೇತ್ರದ ಒಂದರಲ್ಲಿಯೇ ಸ್ಪರ್ಧಿಸಿ ಗೆದ್ದು ಬರಲಿ ಎಂದು ಕೆಆರ್ಐಡಿಎಲ್ ಅಧ್ಯಕ್ಷ ಎಂ. ರುದ್ರೇಶ್ ಸವಾಲು ಹಾಕಿದರು. ನಗರದ ಪಚ್ಚಪ್ಪ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿ. ಸೋಮಣ್ಣ ಈ ಹಿಂದೆಯೇ ಕಾಂಗ್ರೆಸ್ ಹೋಗುತ್ತೇನೆ ಎಂದು ಒಂದು ಕಾಲು ಬಿಜೆಪಿ ಯಿಂದ ಹೊರಗೆ ಹಾಕಿದ್ದರು. ಈಗ ಅವರಿಗೆ ವರುಣಾ ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳನ್ನು ನೀಡುವ ಮೂಲಕ ಹೈಕಮಾಂಡ್ಗೆ ತಪ್ಪು ಮಾಹಿತಿ ಸಿದ್ದರಾಮಯ್ಯ ರೊಂದಿಗೆ ಒಳ ಒಪ್ಪಂದ ಮಾಡಿಗೊಂಡಿದ್ದಾರೆ. ಮುಂದೆ ಅವರು ಕಾಂಗ್ರೆಸ್ ಹೋದರೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ ಎಂದರು.
ಪಕ್ಷದ ವರಿಷ್ಠರು ಈ ಎಲ್ಲವನ್ನು ಗಮನಿಸಿ, ಸೋಮಣ್ಣ ಅವರಿಗೆ ಎರಡು ಕಡೆ ನೀಡಿರುವ ಟಿಕೆಟ್ ಬಗ್ಗೆ ಮರುಪರಿಶೀಲನೆ ಮಾಡಿ, ವರುಣಾದಲ್ಲೇ ಸ್ಪರ್ಧೆ ಮಾಡುವಂತೆ ಸೂಚನೆ ನೀಡಿ, ಚಾ.ನಗರಕ್ಕೆ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು.
ನಾನು ಕೂಡ ಈ ಕ್ಷೇತ್ರದ ಪ್ರಮುಖ ಆಕಾಂಕ್ಷಿಯಾಗಿದ್ದು, ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ಪ್ರವಾಸ ಮಾಡಿ, ಕ್ಷೇತ್ರದ ಮತದಾರರು ಹಾಗು ಅಭಿಮಾನಿಗಳ ವಿಶ್ವಾಸವನ್ನು ಗಳಿಸಿದ್ದೇನೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದ್ದು, ನಾವೆಲ್ಲರು ಸೇರಿ ಕಷ್ಟಪಟ್ಟು ಸಂಘಟನೆ ಮಾಡಿರುವ ಕ್ಷೇತ್ರಕ್ಕೆ ಸೋಮಣ್ಣ ಬಂದು ಸ್ಪರ್ಧೆ ಮಾಡುವುದು ಸರಿಯಲ್ಲ. ಅವರು ಹಿರಿಯ ನಾಯಕರು. ಸಿಎಂ ಆಗುವ ಆರ್ಹತೆಯುಳ್ಳವರು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಮಾನದ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಅವರು ವರುಣಾದಿಂದಲೇ ಸ್ಪರ್ಧೆ ಮಾಡಿ ಸಾಮಾನ್ಯ ಕಾರ್ಯಕರ್ತರಿಗೆ ಚಾಮರಾಜನಗರ ಕ್ಷೇತ್ರವನ್ನು ಬಿಟ್ಟುಕೊಟ್ಟು ನಮ್ಮಂಥ ಅನೇಕ ನಾಯಕರು ಬೆಳೆಯಲು ಅವಕಾಶ ಮಾಡಿಕೊಡಲಿ ಎಂದರು.
ಪಕ್ಷೇತರವಾಗಿ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ನಾಳೆ ಅಭಿಮಾನಿಗಳ ಸಭೆ ನಡೆಸಿ ತೀರ್ಮಾನ ಕೊಳ್ಳುತ್ತೇನೆ. ವಿ.ಸೋಮಣ್ಣ ಕಾರ್ಯಕರ್ತರ ಮುಂದೆ ಯಡಿಯೂರಪ್ಪ ಅವರನ್ನು ಬೈಯುತ್ತಾರೆ ಅವರ ಮುಂದೆ ಹೋಗಿ ಕೈಕಟ್ಟಿ ನಿಲ್ಲುತ್ತಾರೆ. ಇದನ್ನು ನೋಡಿದರೆ ನಮಗೆ ನಾಚಿಕೆಯಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ ಅವರು ಪೋನ್ ಮೂಲಕ ಚರ್ಚೆ ಮಾಡಿದ್ದು, ಬಂಡಾಯವಾಗಿ ನಿಲ್ಲುವ ಬಗ್ಗೆ ಅವರು ಸಲಹೆ ಸೂಚನೆಗಳನ್ನು ಕೇಳಿದ್ದು, ಅವರು ದುಡುಕಿನ ನಿರ್ಧಾರ ಬೇಡ ನಾಳೆ ಎಲ್ಲರು ಕುಳಿತು ಒಂದು ನಿರ್ಣಯ ಕೈಗೊಳ್ಳೋಣ ಎಂದು ತಿಳಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸಂತೇಮರಹಳ್ಳಿ ಬಸವಣ್ಣ, ಗೌಡಿಕೆ ಬಸವಣ್ಣ, ಆಲೂರು ಮಲ್ಲು, ಜ್ಯೋತಿ ರೇವಣ್ಣ ಹಾಜರಿದ್ದರು