ಬೆಂಗಳೂರು, ಜೀವ ಜಂತುಗಳ ಉಗಮ, ಬ್ರಹ್ಮಾಂಡ ರಹಸ್ಯ ಮುಂತಾದ ‘ಸೃಷ್ಟಿ’ ಕುತೂಹಲವನ್ನು ವಿದ್ಯಾರ್ಥಿಗಳಲ್ಲಿ ತಣಿಸುವ ಉದ್ದೇಶದೊಂದಿಗೆ ಆಗಸ್ಟ್ 18 ಮತ್ತು 19 ರಂದು ಬ್ರಹ್ಮಾಂಡ ಪರಿಕಲ್ಪನೆಯ ’ವಾಗ್ದೇವಿ ಕಲಾ ಉತ್ಸವ-2023’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾರತಹಳ್ಳಿಯ ವಾಗ್ದೇವಿ ವಿಲಾಸ ಶಾಲೆ ಹಮ್ಮಿಕೊಂಡಿರುವ ಈ ಕಲಾ ಉತ್ಸವದಲ್ಲಿ ಬ್ರಹ್ಮಾಂಡ ವಿಷಯ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಲು ಹತ್ತಾರು ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ.
ಮಾರತಹಳ್ಳಿಯ ವಾಗ್ದೇವಿ ವಿಲಾಸ ಶಾಲೆಯಲ್ಲಿ ನಡೆಯಲಿರುವ ಈ ಉತ್ಸವವನ್ನು, ಶತಾವಧಾನಿ ಡಾ. ಆರ್. ಗಣೇಶ್ ಅವರು ಉದ್ಘಾಟಿಸಲಿದ್ದಾರೆ. ಕಲಾ ಉತ್ಸವದ ಅಂಗವಾಗಿ 1 ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ 30 ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಬ್ರಹ್ಮಾಂಡ ವಿಷಯದ ಮೇಲೆ ನೃತ್ಯ, ಗಾಯನ, ಚಿತ್ರಕಲೆ, ಪ್ರಬಂಧ, ಭಾಷಣ, ಕವನ ರಚನೆ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉತ್ಸವಕ್ಕೆ ಬೆಂಗಳೂರಿನ 100 ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಆಗಮಿಸಲಿದ್ದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ವಾಗ್ದೇವಿ ವಿಲಾಸ ಸಂಸ್ಥೆ ಪ್ರತಿ ವರ್ಷ ಆಯೋಜಿಸುವ ಕಲಾ ಮತ್ತು ವಿಜ್ಞಾನ ಉತ್ಸವಗಳಲ್ಲಿ ಕಲೆ, ಸಂಸ್ಕೃತಿ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರನ್ನು ಗೌರವಿಸುತ್ತ ಬಂದಿದೆ. ಅದರಂತೆ, ಈ ಬಾರಿ ನಡೆಯುವ ವಾಗ್ದೇವಿ ಕಲಾ ಉತ್ಸವ ಕಾರ್ಯಕ್ರಮದಲ್ಲಿ ವೇದ ವಿದ್ವಾಂಸರಾದ ಚಳ್ಳಕೆರೆ ಎಮ್. ಎಸ್. ರಾಮಸ್ವಾಮಿ ಹಾಗೂ ಎಮ್. ಎಸ್. ಶ್ರೀನಿವಾಸನ್ ಸಹೋದರರನ್ನು ಸನ್ಮಾನಿಸಲಾಗುತ್ತಿದೆ. ಅವರಿಗೆ ’ವಾಗ್ದೇವಿ ವೇದರತ್ನ’ ಎಂಬ ಪ್ರಶಸ್ತಿಯನ್ನು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಹಿರಿಯ ವಿಜ್ಞಾನಿ ಹಾಗೂ ರಾಕೆಟ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಬಿ. ಎನ್. ಸುರೇಶ್ ಅವರು ನೀಡಿ ಗೌರವಿಸಲಿದ್ದಾರೆ.ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು, ದೂರವಾಣಿ: 7899772466 ಅಥವಾ 9686577169.