ಅಭಿಷೇಕ್-ಅವಿವಾ ಬೀಗರೂಟದಲ್ಲಿ ನೂಕು ನುಗ್ಗಲು, ಪೊಲೀಸರಿಂದ ಲಾಠಿಚಾರ್ಜ್
ಮಂಡ್ಯ: ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅವರ ವಿವಾಹ ಬೀಗರ ಔತಣ ಕೂಟದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದರು. ಈ ವೇಳೆ ಊಟಕ್ಕೆ ನೂಕು ನುಗ್ಗಲು ಉಂಟಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ತಡೆದ ಪ್ರಸಂಗ ನಡೆದಿದೆ.
ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿಯ ಸುಮಾರು 15 ಎಕರೆ ವಿಶಾಲ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮಂಡ್ಯ ಅಲ್ಲದೆ, ನೆರೆ ಜಿಲ್ಲೆಗಳಿಂದ ಸಹಸ್ರಾರು ಮಂದಿ ಅಭಿಮಾನಿಗಳು ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಸಸ್ಯಾಹಾರಿ ಮತ್ತು ಮಾಂಸಹಾರಿ ಭೋಜನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗೆ ಸುಮಾರು 11.15ಕ್ಕೆ ನವ ದಂಪತಿಗಳಾದ ಅಭಿಷೇಕ್ ಹಾಗೂ ಅವಿವಾ ಆಗಮಿಸಿದರು. ಬಳಿಕ ವೇದಿಕೆ ಏರಿ ಅಭಿಮಾನಿಗಳಿಗೆ ಹಸ್ತಲಾಘವ ಮಾಡಿದರು. ನಂತರ ಊಟದ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ನೆರೆ ಜಿಲ್ಲೆಗಳಿಂದ ಸಹಸ್ರಾರು ಮಂದಿ ಅಂಬರೀಶ್ ಅಭಿಮಾನಿಗಳು ಔತಣ ಕೂಟಕ್ಕೆ ಬಂದಿದ್ದರು.
ಊಟದ ವ್ಯವಸ್ಥೆ ಮಾಡುವ ಸಂದರ್ಭದಲ್ಲಿ ಮಾಂಸದೂಟಕ್ಕೆ ನೂಕು ನುಗ್ಗಲು ಉಂಟಾಯಿತು. ಇದನ್ನು ಉಪಯೋಗಿಸಿಕೊಂಡ ಜೇಬುಗಳ್ಳರು ಮಹಿಳೆಯರ ಚಿನ್ನಾಭರಣ ಲೂಟಿ ಮಾಡಿದರು. ನಂತರ ನೂಕು ನುಗ್ಗಲು ಉಂಟಾಗಿ ಅಸ್ತವ್ಯಸ್ತವಾಗಿತ್ತು. ಬಳಿಕ ಪೊಲೀಸರು ತಡೆಯುವ ಪ್ರಯತ್ನ ಮಾಡಿದರು.
ಪೊಲೀಸರು ಅಭಿಮಾನಿಗಳನ್ನು ತಡೆಯುತ್ತಿದ್ದಂತೆ ಮಹಿಳೆಯರು ಮತ್ತು ಅಂಬರೀಶ್ ಅಭಿಮಾನಿಗಳು ರೊಚ್ಚಿಗೆದ್ದು ಟೆಂಟನ್ನು ಹರಿದುಹಾಕಿ, ಕಿತ್ತೆಸೆದು ಒಳ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದಾಗಿ ಸುಮಾರು 30ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು, ಮಹಿಳೆಯರು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ.
ನೂಕುನುಗ್ಗಲಿನಲ್ಲಿದ್ದ ಸಾವಿರಾರು ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು. ಆದರೆ ಜನರು ಸರತಿ ಸಾಲಿನಲ್ಲಿ ತೆರಳಲು ಅಳವಡಿಸಲಾಗಿದ್ದ ಕಬ್ಬಿಣದ ಪೈಪ್ಗಳನ್ನೂ ಸಹ ಕಿತ್ತೆಸೆದು ಚೆಲ್ಲಾಪಿಲ್ಲಿ ಮಾಡಿದರು. ಇದರಿಂದಾಗಿ ಕೆಲವರು ಗಾಯಗೊಂಡರು. ನಂತರ ಪರಿಸ್ಥಿತಿ ಹತೋಟಿಗೆ ತಂದು, ಊಟದ ವ್ಯವಸ್ಥೆಯನ್ನು ಸರಿಪಡಿಸಿ ಮತ್ತೆ ಊಟೋಪಚಾರವನ್ನು ಮುಂದುವರಿಸಲಾಯಿತು.