ನಂಜನಗೂಡು ಗ್ರಾಮಾಂತರ ಪೊಲೀಸರಿಂದ ಯುವಕನ ಬಂಧನ
ನಂಜನಗೂಡು:- ಶಾಲೆಗೆ ಹೋಗುವಾಗ ಬರುವಾಗ ಯುವಕನೊರ್ವ ವಿದ್ಯಾರ್ಥಿನಿಯನ್ನು ಚುಡಾಯಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಪರಿಣಾಮ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಂಚಹಳ್ಳಿಹುಂಡಿ ಗ್ರಾಮದಲ್ಲಿ ಜರುಗಿದೆ.
ಬಂಚಹಳ್ಳಿ ಹುಂಡಿ ಗ್ರಾಮದ ರಮೇಶ್ ಎಂಬುವರ ಪುತ್ರಿ ಚಂದನ(15) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮೃತ ವಿದ್ಯಾರ್ಥಿನಿ ಚಂದನ ತಾಂಡವಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು. ಬಂಚಹಳ್ಳಿ ಹುಂಡಿ ಗ್ರಾಮದ ವೆಂಕಟೇಶ್ ಎಂಬುವರ ಪುತ್ರ ಶರತ್ ಎಂಬ ಯುವಕ ವಿದ್ಯಾರ್ಥಿನಿ ಚಂದನಾಳನ್ನು ಶಾಲೆಗೆ ಹೋಗುವಾಗ ಬರುವಾಗ ಹಿಂಬಾಲಿಸಿಕೊಂಡು ಚುಡಾಯಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಚಂದನಾ ತನ್ನ ತಂದೆ ರಮೇಶ್ ರವರಿಗೆ ವಿಷಯ ತಿಳಿಸಿದ್ದು ರಮೇಶ್ ಆರೋಪಿ ವೆಂಕಟೇಶನಿಗೆ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ. ಆ ನಂತರವೂ ಸಹ ವಿದ್ಯಾರ್ಥಿನಿಯನ್ನು ಚುಡಾಯಿಸುವದನ್ನು ಮುಂದುವರೆಸಿದ್ದ ಕಾರಣ ರಮೇಶ್ ತನ್ನ ಮಗಳನ್ನು ಶಾಲೆಯಿಂದ ಬಿಡಿಸಿ ಮನೆಯಲ್ಲಿಯೇ ಉಳಿಸಿಕೊಂಡಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿನಿ ಚಂದನಾ ಶುಕ್ರವಾರ ಬೆಳಿಗ್ಗೆ ಮನೆಯ ತೀರಿಗೆ ತನ್ನ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮೃತ ಚಂದನಾಳ ತಂದೆ ರಮೇಶ್ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಶರತ್ ಎಂಬ ಯುವಕ ನನ್ನ ಮಗಳನ್ನು ಶಾಲೆಗೆ ಹೋಗುವಾಗ ಬರುವಾಗ ಚುಡಾಯಿಸುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವನಂಜಶೆಟ್ಟಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಯುವಕ ಶರತ್ನನ್ನು ಬಂಧಿಸಿ ಶವವನ್ನು ಮಾರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ಠಾಣೆಯಲ್ಲಿ ದೂರು ದಾಖಲಾಗಿದೆ.