ಚಾಮರಾಜನಗರ:- ಚಿಕನ್ ಊಟ ಸೇವಿಸಿದ್ದ ಮಕ್ಕಳಿಗೆ ವಾಂತಿ-ಬೇಧಿಯಾಗಿ ಅಸ್ವಸ್ಥಗೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ.
ಒಟ್ಟು 30 ವಿದ್ಯಾರ್ಥಿಗಳಿಗೆ ವಾಂತಿ-ಬೇಧಿಯಾಗಿದ್ದು, ಈ ಪೈಕಿ ತೀವ್ರ ಅಸ್ವಸ್ಥಗೊಂಡಿದ್ದ 15 ಮಂದಿಗೆ ಬೇಗೂರು ಆಸ್ಪತ್ರೆಯಲ್ಲಿ ಡ್ರಿಪ್ ಹಾಕಿ ಚಿಕಿತ್ಸೆ ಕೊಡಲಾಗುತ್ತಿದೆ. ಭಾನುವಾರ ರಾತ್ರಿ ಚಿಕನ್ ಊಟವನ್ನು ಮಾಡಲಾಗಿತ್ತು. ಅದನ್ನು ತಿಂದ ಬಳಿಕ ವಾಂತಿ-ಬೇಧಿ ಶುರುವಾಗಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಸದ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳು, ಪೊಲೀಸರು ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಇತ್ತೀಚೆಗಷ್ಟೇ ಊಟದಲ್ಲಿ ಹಲ್ಲಿ ಬಿದ್ದು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ರಾಯಚೂರು ತಾಲೂಕಿನ ಅಪ್ಪನದೊಡ್ಡಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು.