ಹುಣಸೂರು: ನಗರದ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಗಳಿಂದ ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ಕಿರುಕುಳ ಆಗುತ್ತಿದೆ ಎಂದು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಕೆಲ ಶಾಲೆಗಳಲ್ಲಿ ಬಟ್ಟೆ, ಪುಸ್ತಕಗಳಿಂದ ಹಿಡಿದು ಶೂ ಕೂಡ ಇಲ್ಲೆ ಪಡೆಯಬೇಕು ಎಂದು ಒತ್ತಡ ಹೇರುತ್ತಿದ್ದರೆ, ಒಂದು ಶಾಲೆಯಲ್ಲಿ ಅಂತೂ 2000 ಮುಖಬೆಲೆಯ ಹಣ ಪಡೆಯಲ್ಲ ಎಂದು ಬೋರ್ಡ್ ಹಾಕುವ ಮೂಲಕ ಸಂವಿಧಾನ ವಿರೋಧಿ ನಡವಳಿಕೆ ತೋರುತ್ತಿದೆ ಎಂದು ಆರೋಪಿಸಿರುವ ಅವರು, ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ಬಡ ಪೋಷಕರಿಗೆ ನ್ಯಾಯಾ ಒದಗಿಸುವ ಜೊತೆ ಮಕ್ಕಳ ಹಕ್ಕುಗಳನ್ನು ಕಾಯಬೇಕು ಎಂದು ಅಗ್ರಹಿಸಿದ್ದಾರೆ.
ಮತ್ತೊಂದು ಪ್ರತಿಷ್ಠಿತ ಶಾಲೆಯಲ್ಲಿ ಎಲ್ಲ ಮಕ್ಕಳಿಂದ ಸಮಾನ ಶುಲ್ಕ ಪಡೆದು, ಅವರ ಬುದ್ದಿ ಶಕ್ತಿ ಆಧಾರದ ಮೇಲೆ ವಿಭಾಗಗಳನ್ನು ಮಾಡಿರುವ ಆರೋಪ ಕೇಳಿ ಬಂದಿದೆ. ಇದು ಶಿಕ್ಷಣ ವ್ಯವಸ್ಥೆಯ ಮಹಾಲೋಪವಾಗಿದೆ ಎಂದರು.
ಬಹುತೇಕ ಶಾಲೆಗಳು ಇನ್ನೂ ಕೂಡ ಸರ್ಕಾರದ ನಿಯಮದಂತೆ ಶುಲ್ಕ ವಿವರ ಪಟ್ಟಿ ಪ್ರದರ್ಶನ ಮಾಡಿಲ್ಲ, ಇದರ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣಕುಮಾರ್ ಒತ್ತಾಯಿಸಿದ್ದಾರೆ.