ಶ್ರೀರಂಗಪಟ್ಟಣ:- ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಪ್ರಮಾಣ ಹೆಚ್ಚಾಗುತಿದೆ. ಜುಲೈ ೩೧ ರಂದು ಸಂಜೆ ೫ ಗಂಟೆಯಿಂದ ಕೆ.ಆರ್.ಎಸ್ ಜಲಾಶಯದಿಂದ ೧,೭೦,೦೦೦ ಕ್ಯೂಸೆಕ್ಸ್ ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ. ಇದರಿಂದಾಗಿ ಶ್ರೀರಂಗಪಟ್ಟಣ ಸಮೀಪದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಅಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಯಂಚಿನ ಹಲವು ಪ್ರದೇಶಗಳು ಭಾಗಶಃ ಜಲಾವೃತವಾಗಿದೆ. ಅಲ್ಲದೇ ಇಡೀ ಶ್ರೀರಂಗಪಟ್ಟಣವು ಕಾವೇರಿ ನದಿಯಿಂದ ಸುತ್ತುವರಿದಿರುವ ದ್ವೀಪ ಪ್ರದೇಶವಾಗಿದ್ದು, ಈಗ ನದಿಯು ಅಪಾಯಕಾರಿಯಾಗಿ ಹರಿಯುತ್ತಿರುವುದರಿಂದ ಅಲ್ಲಿನ ಜನತೆ ಭಯ ಭೀತರಾಗಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿಗೆ ನಿರ್ಮಿಸಿರುವ ಸೇತುವೆ ಕೂಡ ಶೇ.೮೦ರಷ್ಟು ಮುಳಗಡೆಯಾಗಿದೆ.
ಕಾವೇರಿ ನದಿ ಪಾತ್ರದಲ್ಲಿನ ಸಾರ್ವಜನಿಕರು ಸ್ವಯಂ ಮುಂಜಾಗ್ರತೆ ವಹಿಸುವುದು. ಕಾವೇರಿ ನದಿ ಪಾತ್ರಕ್ಕೆ ಅಥವಾ ತಗ್ಗು ಪ್ರದೇಶಗಳಿಗೆ ಭೇಟಿ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸುವುದು. ನದಿಪಾತ್ರದಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿರುವ ರೈತರು ಕೃಷಿ ಚಟುವಟಿಕೆಗಳಿಗೆ ಹೋಗದಂತೆ ಹಾಗೂ ಜಾನುವಾರುಗಳನ್ನು ಬಿಡದಿರಲು ಸೂಚಿಸಲಾಗಿದೆ.
ನದಿಪಾತ್ರದಲ್ಲಿ ಮತ್ತು ಸೇತುವೆ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು, ನೀರಿನಲ್ಲಿ ಈಜುವುದು ಹಾಗೂ ಸೆಲ್ಪಿ ತೆಗೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ತಾಲ್ಲೂಕು ಆಡಳಿತದ ವತಿಯಿಂದ ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಕೈಗೊಂಡಿರುವ ವ್ಯಾಪಕ ಪ್ರಚಾರಗಳನ್ನು ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಅಳವಡಿಸಿರುವ ಸೂಚನಾ ಫಲಕಗಳನ್ನು ಗಮನಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ. ಕುಮಾರ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಸಂಪೂರ್ಣ ಮುಳುಗಡೆ
