ಆರ್ ಸಿಎಚ್
ಮೈಸೂರು: ದಸರಾ ಸಭೆಯಲ್ಲಿ ಪ್ರತ್ಯಕ್ಷಗೊಂಡಿದ್ದ ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅನಂತರದ ಕಾರ್ಯಕ್ರಮ ಹಾಗೂ ಸುದ್ದಿಗೋಷ್ಠಿಯಲ್ಲಿ ನಾಪತ್ತೆಯಾದರು.
ಹೌದು ದಸರಾ ಉನ್ನತ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ದಸರಾ ಕಾರ್ಯಕ್ರಮಗಳ ರೂಪುರೇಷೆಗೆ ಸಂಬಂಧಿಸಿದಂತೆ 18 ಸಮಿತಿಗಳ ಅಧಿಕಾರಿಗಳ ಸಭೆಯನ್ನು ಅರಮನೆ ಆಡಳಿತ ಮಂಡಳಿಯಲ್ಲಿ ನಡೆಸಲಾಯಿತು.
ಇದರಲ್ಲಿ ಮಾಜಿ ಶಾಸಕ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ವೇಳೆ ದಸರಾ ಸಂಬಂಧಿಸಿದಂತೆ ಅಧಿಕಾರಿಗಳಿಂದ ಸಂಪೂರ್ಣ ವಿವರ ಪಡೆದುಕೊಂಡಿದ್ದಲ್ಲದೆ ಕೆಲವೊಂದು ಸಲಹೆಗಳನ್ನು ಸಹ ನೀಡಿದ್ದಾರೆ. ವಿಶೇಷವೆಂದರೆ ಸಭೆಯಲ್ಲಿ ಉಪಸ್ಥಿತರಿದ್ದ ಅವರು ಅನಂತರ ನಡೆದ ದಸರಾ ವೆಬ್ ಸೈಟ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಿಂದ ನಾಪತ್ತೆಯಾಗಿದ್ದಾರೆ. ಮಾತ್ರವಲ್ಲದೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿಯೂ ಅವರು ಕಾಣಸಿಗಲಿಲ್ಲ. ಹೀಗೆ ದಸರಾ ಸಭೆಯಲ್ಲಿದ್ದರೂ ಮಾದ್ಯಮಗಳಿಗೆ ಕಾಣದ ಸಿಎಂ ಪುತ್ರ ಯತೀಂದ್ರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿರದೇ ಏಕೆ ಹೋದರೂ ಎಂಬ ಅವರ ನಡೆ ಅಚ್ಚರಿಗೂ ಸಹ ಕಾರಣವಾಗಿರುವುದು ವಿಶೇಷ. ಈ ಬಗ್ಗೆ ಅವರೇ ಉತ್ತರ ನೀಡಬೇಕಷ್ಟೆ.