ಮೈಸೂರು: ಲೆಕ್ಕ ಪರಿಶೋಧಕ ತಂಡವೇ ಸೇರಿ ಕಟ್ಟಿಕೊಂಡ ಕಾಪ್ಸ್ ಎಂಬ ಎನ್ ಜಿಓ ಸೇವಾ ಸಂಸ್ಥೆಯು ಡಿ.16ರ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳಿಗೆ 1 ಕೋಟಿ ರೂ. ಮೌಲ್ಯದ ಉಪಕರಣಗಳನ್ನು ಕೊಡುಗೆಯಾಗಿ ನೀಡಲಿದೆ.
ಈ ಕುರಿತು ಕಾಪ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕಳೆದ 15 ವರ್ಷಗಳಿಂದ ಲೆಕ್ಕಪರಿಶೋಧಕರೆ ಸೇರಿ ಕಾಪ್ಸ್ ಎಂಬ ಫೌಂಡೇಶನ್ ಸ್ಥಾಪಿಸಿಕೊಂಡು ಹಲವು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ. ಅಂತೆಯೇ ಈ ಬಾರಿ 1000 ಅಂಗನವಾಡಿ ಹಾಗೂ 531 ಶಾಲೆಗಳ ಬೇಡಿಕೆಗೆ ಪೂರಕವಾದ ಬ್ಯಾಗ್, ಕುಡಿಯುವ ನೀರಿನ ಬಾಟಲ್ ಇನ್ನಿತರ ಪರಿಕರಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದೆ. ಈಗಾಗಲೇ ಉಪನಿರ್ದೇಶಕರ ಮಾಹಿತಿ ಮೇರೆಗೆ ವಿತರಣೆಗೆ ಸಿದ್ಧತೆ ನಡೆಸಲಾಗಿದೆ. 3 ಸಾವಿರ ವಿದ್ಯಾರ್ಥಿಗಳು ಹಾಗೂ 2 ಸಾವಿರ ಶಿಕ್ಷಕರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದರು.
ಪ್ಲಾಸ್ಟಿಕ್ ಮುಕ್ತಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಡಿ.16ರ ಬೆ.10.35 ಕ್ಕೆ ನಂಜನಗೂಡಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ಸಿಎಫ್ ಕೊಡುಗೆ ಸಂಭ್ರಮ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ತೆರಿಗೆ ತಜ್ಞ ಸಿಎಹೆಚ್ ಪದಮ್ ಚಂದ್ ಖಿಂಚಾ ಉದ್ಘಾಟಿಸುವರು. ಶಾಸಕ ದರ್ಶನ್ ದ್ರುವನಾರಾಯಣ್ ಅಧ್ಯಕ್ಷತೆವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಿಡಿಪಿಐ ಎಚ್.ಕೆ.ಪಾಂಡು, ನಿರಾಮಯ ಯೋಗ ಕುಟೀರಮ್ ಸಂಸ್ಥಾಪಕ ಬಿ.ರಾಘವೇಂದ್ರ ಶೆಣೈ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಹೆಚ್ ಎಂ ಸಂಘದ ಅಧ್ಯಕ್ಷ ಸೋಮೇಗೌಡ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಕೆ.ವಸಂತ್ ಕುಮಾರ್, ನಿವೃತ್ತ ಮುಖ್ಯ ಶಿಕ್ಷಕ ಬಸವರಾಜು, ಫೌಂಡೇಶನ್ ಸದಸ್ಯ ಸುಮಂತ್ ಗೋಷ್ಠಿಯಲ್ಲಿದ್ದರು.