ಹೊಸದಿಲ್ಲಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಕರ್ನಾಟಕ ಹೈಕೋರ್ಟ್ ನೀಡಿರುವ ತಡೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಸಿಬಿಐ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್, ಜುಲೈ 14ಕ್ಕೆ ಮುಂದೂಡಿದೆ. ಆದರೆ ಸಿಬಿಐ ಪರ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ. ಇದರಿಂದ ರಾಜ್ಯದಲ್ಲಿ ಸಿಎಂ ಸ್ಥಾನ ಗಿಟ್ಟಿಸಲು ಪ್ರಯತ್ನಿಸುತ್ತಿರುವ ಅವರಿಗೆ ಅದರ ನಡುವೆ ನಿರಾಳತೆ ದೊರಕಿದೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯ್ ಮತ್ತು ಸಂಜಯ್ ಕರೋಲ್ ಅವರನ್ನು ಒಳಗೊಂಡ ನ್ಯಾಯಪೀಠ ಬುಧವಾರ ಸಿಬಿಐ ಅರ್ಜಿಯನ್ನು ಕೈಗೆತ್ತಿಕೊಂಡಿತು. ಡಿಕೆ ಶಿವಕುಮಾರ್ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ಪ್ರಕರಣವು ಮೇ 23ರಂದು ಕರ್ನಾಟಕ ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ ಎಂದು ಮಾಹಿತಿ ನೀಡಿದರು. ಇದರ ಬಳಿಕ ನ್ಯಾಯಪೀಠ ಪ್ರಕರಣ ಮುಂದೂಡಿತು.
ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಸಿದ ಭ್ರಷ್ಟಾಚಾರ ಪ್ರಕರಣದ ಸಿಬಿಐ ತನಿಖೆಗೆ ಫೆಬ್ರವರಿ 10ರಂದು ಕರ್ನಾಟಕ ಹೈಕೋರ್ಟ್ ತಡೆ ನೀಡಿತ್ತು. ಇದರ ಬಳಿಕ ಅನೇಕ ಬಾರಿ ತಡೆಯಾಜ್ಞೆಯನ್ನು ವಿಸ್ತರಣೆ ಮಾಡಲಾಗಿತ್ತು. 2017ರಲ್ಲಿ ಡಿಕೆ ಶಿವಕುಮಾರ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಅದರ ಆಧಾರದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು. ಇಡಿ ತನಿಖೆ ಬೆನ್ನಲ್ಲೇ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಿಬಿಐ ಮನವಿ ಮಾಡಿತ್ತು.
2019ರ ಸೆಪ್ಟಂಬರ್ನಲ್ಲಿ ಸಿಬಿಐಗೆ ಅನುಮೋದನೆ ದೊರಕಿತ್ತು. 2020ರ ಅಕ್ಟೋಬರ್ 3ರಂದು ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಡಿಕೆಶಿ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ತಮ್ಮ ವಿರುದ್ಧದ ಪ್ರಕರಣ ಹಾಗೂ ತನಿಖೆಯನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. 2020ರಲ್ಲಿಯೇ ಪ್ರಕರಣ ದಾಖಲಿಸಿದ್ದರೂ ಈಗ ತಮಗೆ ನಿರಂತರವಾಗಿ ನೋಟಿಸ್ಗಳನ್ನು ಜಾರಿ ಮಾಡುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮ ಮೇಲೆ ಮಾನಸಿಕ ಒತ್ತಡ ಹೇರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು. ಸಿಬಿಐ ತನಿಖೆಗೆ ಹೈಕೋರ್ಟ್ ತಡೆ ನೀಡಿದ್ದರೂ, ತನಿಖೆಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಲು ಅದು ನಿರಾಕರಿಸಿತ್ತು.
ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್, ಹೈಕೋರ್ಟ್ ಬೇಸಿಗೆ ರಜೆ ಅವಧಿ ಮುಗಿಯುತ್ತಿರುವುದರಿಂದ ಅಲ್ಲಿಯೇ ವಿಚಾರಣೆ ನಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.
2017ರ ಆಗಸ್ಟ್ನಲ್ಲಿ ಹೊಸದಿಲ್ಲಿ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಸೇರಿದ ಇತರೆ ಸ್ಥಳಗಳಲ್ಲಿ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಸುಮಾರು 41 ಲಕ್ಷ ರೂ ದಾಖಲೆ ರಹಿತ ನಗದು ಸಿಕ್ಕಿತ್ತು ಎಂದು ಹೇಳಿತ್ತು. ಈ ಸಂಬಂಧ ಆದಾಯ ತೆರಿಗೆ ಕಾಯ್ದೆ 1961ರ ನಿಯಮಗಳ ಅಡಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.