ಸೈರಾಂಗ್: ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆಯ ಸ್ಟೀಲ್ ಗರ್ಡರ್ ಕುಸಿದ ಪರಿಣಾಮ ೨೬ ಮಂದಿ ಮೃತಪಟ್ಟು, ೪ಕ್ಕೂ ಹೆಚ್ಚು ಮಂದಿ ನಾಪತ್ತೆಯಾದ ಘಟನೆ ಮಿಜೋರಾಂನ ಸೈರಾಂಗ್ನಲ್ಲಿ ನಡೆದಿದೆ. ಸದ್ಯ ಮಿಜೋರಾಂ ಪೊಲೀಸ್ ಮೂಲಗಳ ಪ್ರಕಾರ ಎರಡು ಎನ್ಡಿಆರ್ಎಫ್ ತಂಡಗಳು ಮತ್ತು ಎರಡು ರಾಜ್ಯ ವಿಪತ್ತು ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎನ್ನಲಾಗಿದೆ.
ಮಿಜೋರಾಂನ ರಾಜಧಾನಿ ಐಜ್ವಾಲ್ ನಗರದಿಂದ ಸುಮಾರು 20 ಕಿಮೀ ದೂರದಲ್ಲಿರುವ ಕುರುಂಗ್ ನದಿಯ ಮೇಲೆ ಈ ಘಟನೆ ಸಂಭವಿಸಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಸೇತುವೆಯ ಒಂದು ಭಾಗ ಕುಸಿದಾಗ 40 ಕಾರ್ಮಿಕರು ಸ್ಥಳದಲ್ಲಿದ್ದರು. ಘಟನೆಯಲ್ಲಿ ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಮೃತರೆಲ್ಲರೂ ಪಶ್ಚಿಮ ಬಂಗಾಳಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶಾನ್ಯ ಗಡಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡಿ, ಕೆಲವು ನಿರ್ಮಾಣ ಕಾರ್ಯಗಳು ನಡೆಯುತ್ತಿರುವುದರಿಂದ ಘಟನೆಯ ಸಮಯದಲ್ಲಿ ರೈಲ್ವೆ ಸುರಕ್ಷತಾ ತಂಡವು ಈಗಾಗಲೇ ಸ್ಥಳದಲ್ಲಿತ್ತು. ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ಸ್ಟೀಲ್ ಗರ್ಡರ್ ಅನ್ನು ಪ್ರಾರಂಭಿಸುವ ಕೆಲಸವನ್ನು ಗುತ್ತಿಗೆದಾರರೊಬ್ಬರು ಮಾಡುತ್ತಿದ್ದು, ಇದೇ ಗರ್ಡರ್ ಕುಸಿದಿದೆ. ಅರ್ಧ ಗಂಟೆಯೊಳಗೆ ಎನ್ಡಿಆರ್ಎಫ್ ಸ್ಥಳಕ್ಕೆ ತಲುಪಿದೆ ಮತ್ತು ಈಗ ರಾಜ್ಯ ತಂಡ ರಕ್ಷಣಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಕುಸಿತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು. ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ, ಹಾಗಾಗಿ ತನಿಖೆ ಮುಂದುವರೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಗಳನ್ನು ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ. ಅಲ್ಲದೆ ರೈಲ್ವೆ ಸಚಿವಾಲಯದ ಅಧಿಕಾರಿಗಳು ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಮತ್ತು ಇತರ ಗಾಯಾಳುಗಳಿಗೆ 50,000 ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ.