ಸದ್ಯದ ಕೊರೊನಾ ಪರಿಸ್ಥಿತಿಯಿಂದ ರೋಗ ನಿರೋಧಕ ಶಕ್ತಿಯೇ ಮನುಷ್ಯನಿಗೆ ಮುಖ್ಯವೆಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಆದರೆ ನಾವು ಇಷ್ಟಪಟ್ಟು ಕುಡಿಯುವ ಸೋಡಾ ನಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಕುಂದಿಸುತ್ತಿದೆ ಎಂದರೆ ಆಶ್ಚರ್ಯವಾಗುತ್ತಿದೆಯಾ? ಹೌದು, ವಿವಿಧ ಬಗೆಯ ಸೋಡಾ ಸೇವನೆಯು ಹೃದಯದ ಆರೋಗ್ಯ ಮತ್ತು ರೋಗನಿರೋಧಕ ವ್ಯವಸ್ಥೆಗೆ ಕೆಟ್ಟಪರಿಣಾಮ ಬೀರುವುದಲ್ಲದೇ, ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುವುದು. ಅದು ಹೇಗೆ ಎಂಬುದನ್ನು ಇಲ್ಲಿ ನೊಡೋಣ.
ಸೋಡಾ ರೋಗ ನಿರೋಧಕ ಶಕ್ತಿಯನ್ನು ಹೇಗೆ ಕಡಿಮೆ ಮಾಡುತ್ತದೆ?
ಸೋಡಾವನ್ನು ಮುಖ್ಯವಾಗಿ ಸಕ್ಕರೆಯಿಂದ ತಯಾರಿಸಲಾಗುತ್ತಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ನಿಮ್ಮ ದೇಹವು ಅನಾರೋಗ್ಯದ ವಿರುದ್ಧ ಹೋರಾಡುವುದಕ್ಕೆ ಅಡ್ಡಿಯಾಗಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ನೊಡೋಣ.
ಕೆಟ್ಟ ಬ್ಯಾಕ್ಟೀರಿಯಾವನ್ನು ಪೋಷಿಸುವುದು:
ಕೇವಲ ೩೫೦ ಮಿಲಿ ಸೋಡಾದಲ್ಲಿ ಸುಮಾರು ೩೯ ಗ್ರಾಂ ಸಕ್ಕರೆ ಇರುತ್ತದೆ. ಹಾಗಾದರೆ ಇದನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದಾಗ ಅನೇಕ ಆರೋಗ್ಯ ಸಮಸ್ಯೆಗಳಿಗೆ ನಾವೇ ಕರೆನೀಡಿದಂತಾಗುವುದು. ಸಕ್ಕರೆಯು ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ಸಂತಾನೋತ್ಪತ್ತಿಗೆ ಸಹಾಯ ಮಾಡುವುದಲ್ಲದೇ, ದೇಹದಾದ್ಯಂತ ಸುಲಭವಾಗಿ ಹರಡಲು ನೆರವಾಗುವುದು.ಈ ಮೂಲಕ ರೋಗ ನಿರೋಧಕ ಶಕ್ತಿಯನ್ನು ನಿಗ್ರಹಿಸುತ್ತದೆ.
ಸೋಂಕಿನ ಅಪಾಯವನ್ನು ಹೆಚ್ಚಿಸುವುದು
ಸೋಡಾ ಅತಿಯಾಗಿ ಕುಡಿಯುವುದರಿಂದ ಸೋಂಕಿನ ಅಪಾಯ ಹೆಚ್ಚು. ಆದರೆ ಟೈಪ್ ೨ ಡಯಾಬಿಟಿಸ್ ನಿಂದ ಬಳಲುತ್ತಿರುವ ಜನರಿಗೆ ಇನ್ನೂ ಹೆಚ್ಚು ಅಪಾಯ. ಸೋಂಕಿನ ವಿರುದ್ಧ ಹೋರಾಡಲು ಬಿಳಿ ರಕ್ತ ಕಣಗಳು ಬಹಳ ಮುಖ್ಯ. ಆದರೆ ಸೋಡಾದಲ್ಲಿರುವ ಸಕ್ಕರೆ ಈ ಬಿಳಿ ರಕ್ತ ಕಣಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಟೈಪ್ ೨ ಡಯಾಬಿಟಿಸ್ನಿಂದ ಬಳಲುತ್ತಿರುವ ಜನರು ಸೋಡಾವನ್ನು ಸೇವಿಸದಿರುವುದು ಉತ್ತಮ.
ಟೈಪ್ ೨ ಮಧುಮೇಹದ ಅಪಾಯ ಹೆಚ್ಚಿಸುವುದು
ನಿಯಮಿತವಾಗಿ ಸೋಡಾ ಕುಡಿಯುವುದರಿಂದ ಟೈಪ್ ೨ ಡಯಾಬಿಟಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಇಂತಹ ಪಾನೀಯಗಳನ್ನು ನಿಯಮಿತವಾಗಿ ಕುಡಿಯುವುದರಿಂದ ಇನ್ಸುಲಿನ್ ಸಂವೇದನೆ ಕಡಿಮೆಯಾಗುತ್ತದೆ. ಇದರಿಂದ ಟೈಪ್ ೨ ಮಧುಮೇಹವನ್ನು ಅಭಿವೃದ್ಧಿಯಾಗುವ ಸಾಧ್ಯತೆ ಹೆಚ್ಚು. ಸೋಡಾವನ್ನು ಕಡಿಮೆ ಮಾಡುವುದರ ಜೊತೆಗೆ, ಸ್ಯಾಚುರೇಟೆಡ್ ಕೊಬ್ಬನ್ನು ಕಡಿಮೆ ಮಾಡುವುದರಿಂದ ಟೈಪ್ ೨ ಡಯಾಬಿಟಿಸ್ ಅಪಾಯವನ್ನು ಕಡಿಮೆ ಮಾಡಬಹುದು.
ಉರಿಯೂತಕ್ಕೆ ನಾಂದಿ
ಸೋಡಾ ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಇದು ಕೇವಲ ರೋಗನಿರೋಧಕ ವ್ಯವಸ್ಥೆಗೆ ಅಡ್ಡಿಯಾಗುವುದಲ್ಲದೇ, ಜೀವನದಲ್ಲಿ ದೀರ್ಘಕಾಲದ ಕಾಯಿಲೆ ಬರುವ ಅಪಾಯವನ್ನು ಹೆಚ್ಚು. ಅಧ್ಯಯನಗಳು ಸೋಡಾವನ್ನು ನಿಯಮಿತವಾಗಿ ಸೇವಿಸುವ ಜನರು ಮತ್ತು ಹಾಲು ಮತ್ತು ನೀರು ಸೇವಿಸಿದವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಕ್ ಆಮ್ಲವನ್ನು ಹೊಂದಿದ್ದು, ಇದು ಉರಿಯೂತವನ್ನು ಉತ್ತೇಜಿಸುತ್ತದೆ.
ಬೊಜ್ಜಿನ ಅಪಾಯ ಹೆಚ್ಚು
ಅಧಿಕ ತೂಕವಿರುವುದು ರೋಗ ನಿರೋಧಕ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ತಿಳಿದಿರುವ ವಿಚಾರ. ಅದರ ಜೊತೆಗೆ ನಿಯಮಿತವಾಗಿ ಸೋಡಾವನ್ನು ಕುಡಿಯುವುದರಿಂದ ಸಮಯಕ್ಕೆ ತಕ್ಕಂತೆ ತೂಕ ಹೆಚ್ಚಾಗುತ್ತದೆ. ಸೋಡಾ ಕೇವಲ ಕ್ಯಾಲೊರಿಗಳನ್ನು ನೀಡುತ್ತವೆಯೇ ಹೊರತು ಯಾವುದೇ ಪೋಷಕಾಂಶಗಳನ್ನಲ್ಲ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.