ಮೈಸೂರು: ಏ.03:- ಸೋಲಿಸುವುದು, ಗೆಲ್ಲಿಸುವುದು ಜನರ ಕೈಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚ್ಯವಾಗಿ ತಿಳಿಸಿದರು.
ಕಾರ್ಯಕ್ರಮ ನಿಮಿತ್ತ ಭಾನುವಾರ ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯರನ್ನು ಕಟ್ಟಿಹಾಕಲು ಚಿಂತನೆ ನಡೆದಿದೆಯಲ್ಲ ಎಂಬ ವಿಚಾರ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೂ, ಯಾರನ್ನೂ ಕೂಡ ಕಟ್ಟಿಹಾಕಲು ಸಾಧ್ಯವಿಲ್ಲ. ಸೋಲಿಸುವುದು, ಗೆಲ್ಲಿಸುವುದು ಜನರ ಕೈಯಲ್ಲಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಚಾಮರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಟಿಕೆಟ್ ವಿಚಾರ ನಾಳಿದ್ದು ಇತ್ಯರ್ಥವಾಗಲಿದೆ. ನಾಳಿದ್ದು ನಡೆಯುವ ಸಭೆಯ ಬಳಿಕ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ ಎಂದರು.
ನಾನು ಕೋಲಾರಕ್ಕೆ ಹೋಗುವುದು ಹೈಕಮಾಂಡ್ ನ ತೀರ್ಮಾನವಾಗಿದೆ. ನಾನು ವರುಣ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಈಗಲೂ ಹೋಗುವುದಿಲ್ಲ. ನಾಮಪತ್ರ ಸಲ್ಲಿಕೆಗೆ ಮಾತ್ರ ಅಲ್ಲಿಗೆ ಹೋಗುತ್ತೇನೆ. ಎಲ್ಲದಕ್ಕೂ ನನ್ನ ಮಗ, ಶಾಸಕ ಯತೀಂದ್ರ ಇದ್ದಾರೆ. ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ ಎಂದರು.
ಮೀಸಲಾತಿ ಪರಿಷ್ಕರಣೆಯಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಯಾವುದೇ ರೀತಿಯ ಪೂರ್ವ ತಯಾರಿ ಇಲ್ಲದೇ ಚುನಾವಣೆಗೋಸ್ಕರ ಎಳೆದು ತಂದಿರುವ ವಿಷಯ. ನಿಯಮ ಮೀರಿ ಶೇ.6 ರಷ್ಟು ಹೆಚ್ಚಳವಾಗಿದೆ. ಇದಕ್ಕೆ ಸಂವಿಧಾನದ ತಿದ್ದುಪಡಿ ಆಗಬೇಕಿತ್ತು. ಸದನದಲ್ಲಿ ಇದರ ಬಗ್ಗೆ ಚರ್ಚೆ ನಡೆಯಬೇಕಿತ್ತು ಇದ್ಯಾವುದನ್ನೂ ಇವರ ಪಾಲಿಸಿಲ್ಲ ಎಂದು ಆರೋಪಿಸಿದರು.
ಇದೇ ಕಾರಣದಿಂದ ಇದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ. ಸಮಿತಿಯಿಂದ ವರದಿ ಬಂದಿದ್ದು 2017ರಲ್ಲಿ. ನಾಲ್ಕು ವರ್ಷ ಅದನ್ನು ಜಾರಿಗೊಳಿಸದೇ ಏನು ಮಾಡುತ್ತಿದ್ದರು. ಇದೆಲ್ಲಾ ಕೇವಲ ಚುನಾವಣೆಯ ಗಿಮಿಕ್ ಎಂದು ಹೇಳಿದರು.
ಜೇನುಗೂಡಿಗೇ ಕೈ ಹಾಕಿ ಜನರಿಗೆ ಸಿಹಿ ಹಂಚಿದ್ದೇನೆ ಎಂಬ ಸಿಎಂ ಹೇಳಿಕೆ ವಿಚಾರ ಕುರಿತು ಮಾತನಾಡಿದ ಸಿದ್ದರಾಮಯ್ಯ, ಇವರೇನು ಇದೇ ಮೊದಲ ಬಾರಿ ಮೀಸಲಾತಿ ಪರಿಷ್ಕರಣೆ ಮಾಡಿಲ್ಲ. 2ಎ, 2ಬಿ, 3ಎ, 3ಬಿ ಗಳನ್ನು ಮೊದಲೇ ಮಾಡಲಾಗಿದೆ. 1994 ರಿಂದಲೂ 2ಬಿ ಮೀಸಲಾತಿ ಇತ್ತು. ಅದನ್ನು 2023 ರಲ್ಲಿ ಏಕೆ ತೆಗೆಯಲಾಯಿತು ಎಂದು ಪ್ರಶ್ನಿಸಿದರು.
ಎಲ್ಲರಿಗೂ ಒಂದೇ ಕಾನೂನು:
ಏಪ್ರಿಲ್ 9ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರಮೋದಿ ಭೇಟಿ ನೀಡುವ ವಿಚಾರ ಕುರಿತು ಪ್ರಸ್ತಾಪಿಸಿದ ಅವರು ಚುನಾವಣಾ ನೀತಿ ಸಂಹಿತೆ ಎಂದರೆ ಎಲ್ಲರಿಗೂ ಒಂದೇ. ಎಂಎಲ್ ಎಗೂ ಒಂದೇ ಪ್ರಧಾನಿಗೂ ಒಂದೇ. ಚುನಾವಣಾ ಆಯೋಗ ಅವರಿಗೆ ಅನುಮತಿ ನೀಡಿದೆಯೇ? ಸರ್ಕಾರಿ ಕಾರ್ಯಕ್ರಮವಾದರೆ ಭಾಗವಹಿಸಲು ಹೇಗೆ ಸಾಧ್ಯ.
ಕಾರ್ಯಕ್ರಮಕ್ಕೆ ಅನುಮತಿ ಸಿಕ್ಕಿದೆಯೇ ಎಂಬುದನ್ನು ನೋಡಬೇಕು. ಚುನಾವಣೆ ನೀತಿ ಸಂಹಿತೆ ಎಲ್ಲರಿಗೂ ಒಂದೇ ಎಂದು ಪ್ರತಿಪಾದಿಸಿದರು.