ಕಾರವಾರ: ನಾಡಿನ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದ ಹಂದಿಯೊಂದನ್ನು ನಾಡಬಾಂಬ್ ಇಟ್ಟು ಹತ್ಯೆ ಮಾಡಿರುವ ಘಟನೆ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದಲ್ಲಿ ನಡೆದಿದೆ.
ಇನ್ನು ಘಟನಾ ಸ್ಥಳದಲ್ಲಿ ಪೆÇಲೀಸರು ಮತ್ತೊಂದು ಸಜೀವ ಬಾಂಬ್ ಪತ್ತೆ ಮಾಡಿದ್ದಾರೆ. ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.
ತಾಲೂಕಿನ ಚೆಂಡಿಯಾದ ಸ್ಮಶಾನದ ಬಳಿ ಆಗಸ್ಟ್ 4ರಂದು ನಾಡಬಾಂಬ್ ಸ್ಫೋಟವಾಗಿ ಹಂದಿಯೊಂದು ಮೃತಪಟ್ಟಿತ್ತು. ತಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಹಂದಿ ಸಾವಿನಿಂದ ಗ್ರಾಮಸ್ಥರು ತೀವ್ರ ದುಖಃಕ್ಕೆ ಒಳಗಾಗಿದ್ದರು. ತಕ್ಷಣ ಈ ಬಗ್ಗೆ ಪೆÇಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೀಫ್ರನ್ ಥಾಮಸ್ ಫರ್ನಾಂಡಿಸ್ ಎಂಬುವವರನ್ನು ಬಂಧಿಸಿದ್ದರು.
ಇನ್ನು ನಾಡ ಬಾಂಬ್ ಸ್ಪೋಟವಾದ ಪ್ರದೇಶದಲ್ಲಿಯೇ ಮತ್ತೊಂದು ನಾಡಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೆÇಲೀಸರು ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಇದೀಗ ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವರ್ಷದಿಂದ ಕಾಡು ಹಂದಿಗಳ ಗುಂಪು ಜನ ವಸತಿ ಪ್ರದೆಶಗಳಿಗೆ ಬರುವುದನ್ನು ಚೆಂಡಿಯಾ ಗ್ರಾಮದ ಜನರು ಗಮನಿಸಿದ್ದರು.
ಬಳಿಕ ಅದರಲ್ಲಿ ಒಂದು ಹಂದಿ ಜನರ ಸಂಪರ್ಕದಲ್ಲಿಯೇ ಇರುವುದರಿಂದ ಅದಕ್ಕೆ ಹಣ್ಣು, ತರಕಾರಿ ಸೇರಿದಂತೆ ಆಹಾರ ನೀಡುತ್ತಿದ್ದರು. ಕಾಡು ಹಂದಿಯೂ ಜನರಿಗೆ ತೊಂದರೆ ಕೊಡದೇ ರಾತ್ರಿ ವೇಳೆ ಬಂದು ಆಹಾರ ತಿಂದು ಹೋಗುತ್ತಿತ್ತು. ಒಮ್ಮೊಮ್ಮೆ ಹಗಲಿನ ವೇಳೆಯಲ್ಲಿಯೂ ಬರುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.