ಮೈಸೂರು: ಹುಣಸೂರು ತಾಲ್ಲೂಕಿನ ಹುಲ್ಲೇನಹಳ್ಳಿ ಸರಕಾರಿ ಶಾಲೆಯಲ್ಲಿ ಅವ್ಯವಸ್ಥೆ ನೋಡತೀರದಾಗಿದ್ದು ಈ ಬಗ್ಗೆ ಗಮನ ಹರಿಸದಿದ್ದರೆ ಆಮ್ ಆದ್ಮಿ ಪಕ್ಷದಿಂದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಸೋಸಲೆ ಸಿದ್ದರಾಜು, ಮೇಲಿನ ಶಾಲೆಯಲ್ಲಿ ಶಾಲೆಯ ಕೊಠಡಿಗಳು ಮಳೆ ಬಂದರೆ ಸೋರುವುದು, ಮೇಲೆ ನೀರು ನಿಲ್ಲುವುದು, ಕಸ ಕಡ್ಡಿಗಳು ಬೆಳೆದು ನಿಂತಿರುವುದು ಇವು ಸಾಮಾನ್ಯವಾಗಿವೆ. ಮಳೆ ಬಂದಾಗ ಮಕ್ಕಳು ಆ ಕೊಠಡಿಯಿಂದ ಈ ಕೊಠಡಿಗೆ ಓಡಾಡಿ ಪಾಠವನ್ನು ಕೇಳಬೇಕಾಗಿದೆ. ರಂಗಮಂದಿರ ಕಟ್ಟಲು ಹೋಗಿ ಅರ್ಧ ಕೆಲಸ ಮಾಡಿ 20 ವರ್ಷಗಳಾಗಿವೆ. ಸು. 70 ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ನಮಗೆ ಅನುದಾನ ಇಲ್ಲ ಎನ್ನುತ್ತಾರೆಂದರು.
ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇದೆ ಎಂದು ಹೇಳಿ ಅಸಹಾಯಕರಾಗುತ್ತಾರೆ. ನರೇಗಾ ಯೋಜನೆಯಲ್ಲಿ 300 ರೂ. ಕೂಲಿ ಹಣದಲ್ಲಿ ಒಂದು ಶಾಲೆಯ ಹೊಸ ಕಟ್ಟಡವನ್ನು ಕಟ್ಟಲು ಸಾಧ್ಯವೇ? ಮುನ್ನೂರು ರೂಪಾಯಿ ಕೂಲಿಗೆ ಈಗ ಯಾರು ಕೆಲಸಕ್ಕೆ ಬರುತ್ತಾರೆ? ಬಂದರೂ ಕಬ್ಬಿಣ, ಸಿಮೆಂಟ್ ಮತ್ತು ಇತರೆ ವಸ್ತುಗಳನ್ನು ಯಾರು ಕೊಡುತ್ತಾರೆ? ಇಷ್ಟು ಸಾಮಾನ್ಯವಾದ ಸಂಗತಿ ನಮ್ಮ ರಾಜಕಾರಣಿಗಳಿಗೆ ಏಕೆ ತಿಳಿಯುತ್ತಿಲ್ಲ? ಅಥವಾ ತಿಳಿದರೂ ಖಾಸಗಿ ಶಾಲೆಗಳಿಗೆ ಪರೋಕ್ಷ ಬೆಂಬಲ ಇದೆಯೇ? ಅಲ್ಲಿಯ ಈಗಿನ ಮತ್ತು ಹಿಂದಿನ ಶಾಸಕರಿಗೆ ಇವುಗಳು ಏಕೆ ಕಣ್ಣಿಗೆ ಕಾಣುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ. ಬರೀ ರಾಜಕೀಯ ಹೇಳಿಕೆಗಳಿಗೆ ಸೀಮಿತವೇ ಅವರ ಅಧಿಕಾರವೇ, ಶಿಕ್ಷಣ ಮಂತ್ರಿಗಳು ಬರೀ ಬೆಂಗಳೂರಿನಲ್ಲಿ ಕುಳಿತು ಹೇಳಿಕೆಗಳನ್ನು ನೀಡಿದರೆ ಸಾಲದು. ಶಾಲೆಯ ಕಟ್ಟಡದ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಏಕೆಂದರೆ ಅವರ ಮಕ್ಕಳು ಈ ಶಾಲೆಗಳಲ್ಲಿ ಓದುತ್ತಿಲ್ಲವಲ್ಲ. ಬಡವರ ಮಕ್ಕಳು ತಾನೇ ಇಲ್ಲಿ ಓದುವುದು. ಅದು ಹೇಗಿದ್ದರೇನು ಎನ್ನುವ ಉದಾಸೀನತೆಯೇ ಎಂದು ಪ್ರಶ್ನಿಸಿದರು. ಒಂದು ತಿಂಗಳ ಒಳಗಾಗಿ ಇದನ್ನು ಸರಿಪಡಿಸಿ ಕ್ರಮ ಕೈಗೊಳ್ಳದಿದ್ದರೆ ಆಮ್ ಆದ್ಮಿ ಪಕ್ಷವು ಮೈಸೂರು ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು.
ಅಂತೆಯೇ ಪ್ರತಿ ತಾಲ್ಲೂಕಿನ 100 ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅರಿಯುವ ಕೆಲಸ ಮುಂದಿನ ದಿನಗಳಲ್ಲಿ ಪಕ್ಷ ಮಾಡಲಿದೆ. ಕಳೆದ ಬಾರಿ ನರಸೀಪುರದಲ್ಲಿ ಪಕ್ಷ ಬೆಳಕಿಗೆ ತಂದ ಶಾಲಾ ದುಸ್ಥಿತಿ ಬಗ್ಗೆ ಕ್ರಮವಹಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಂಗಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಉಷಾ, ಕಾರ್ಮಿಕ ಸಂಪತ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐಶ್ವರ್ಯ ಇನ್ನಿತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.